ದೇಣಿಗೆಯೊಂದಿಗೆ ತನ್ನ 25ಲಕ್ಷ ರೂ. ಸೇರಿಸಿ ರಾಮಮಂದಿರ ನಿರ್ಮಿಸಿದ ಗ್ರಾಮ ಸರಪಂಚ‌ ಶೇಖ್ ಮೀರಾ ಸಾಹೇಬ್

Update: 2022-06-21 15:18 GMT
Thenewindianexpress

 ಖಮ್ಮಾಮ್: ತೆಲಂಗಾಣದ  ಬುಡಿಡಂಪಡು ಗ್ರಾಮದಲ್ಲಿ ರೂ. 25 ಲಕ್ಷ ಕೊಡುಗೆ ನೀಡಿ ರಾಮ ದೇವಾಲಯ ನಿರ್ಮಿಸಿದ ಮುಸ್ಲಿಂ ವ್ಯಕ್ತಿಯೊಬ್ಬರ ಹೃದಯವೈಶಾಲ್ಯತೆಗೆ ಎಲ್ಲರೂ ತಲೆದೂಗಿದ್ದಾರೆ.

ಖಮ್ಮಾಮ್‌ ಜಿಲ್ಲೆಯ ರಘುನಡಪಲಂ ಮಂಡಲದಲ್ಲಿರುವ ಈ ಗ್ರಾಮದ ಸರಪಂಚರಾಗಿರುವ ಶೇಖ್‌ ಮೀರಾ ಸಾಹೇಬ್‌ ಎಂಬವರೇ ಈ ದೇವಸ್ಥಾನ ನಿರ್ಮಿಸಿದವರು. ಅವರು ತಮ್ಮ ಸ್ವಂತ ರೂ. 25 ಲಕ್ಷ ಹಣದೊಂದಿಗೆ ದೇಣಿಗೆ ರೂಪದಲ್ಲಿ ಹರಿದು ಬಂದ ರೂ. 25 ಲಕ್ಷ ಸೇರಿಸಿ ಈ ದೇವಸ್ಥಾನವನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಆದಿವಾಸಿ ಕುಟುಂಬಕ್ಕೆ ಸೇರಿದ ಮೂವರು ಸೋದರರಾದ ಕೆಬಿಚ, ನಂದ ಮತ್ತು ಕೊನ್ಯ ಎಂಬವರು ದೇವಳಕ್ಕಾಗಿ 1000 ಚದರ ಯಾರ್ಡ್‌ ಭೂಮಿ ದೇಣಿಗೆ ನೀಡಿದ್ದಾರೆ. ತಾವು ದೇವಳಗಳು ಮತ್ತು ಚರ್ಚುಗಳಿಗೂ ತೆರಳುತ್ತೇವೆ ಎಂದು ಹೇಳುವ ಶೇಖ್ ʻʻನಾವು ಸಾಯುವಾಗ ಏನನ್ನೂ ಕೊಂಡು ಹೋಗುವುದಿಲ್ಲ, ನಾವು ಮಾಡಿದ ಕೆಲಸಗಳಷ್ಟೇ ಎಲ್ಲರ ನೆನಪಿನಲ್ಲಿರುತ್ತವೆ,ʼʼಎಂದು ಹೇಳುತ್ತಾರೆ.

ʻʻರಾಜ್ಯದಲ್ಲಿ ಮುಸ್ಲಿಮರು ಹಲವು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ನಿಝಾಮ್‌ ಎಂಬವರು ಭದ್ರಾಚಲಂ ರಾಮಾಲಯಂ ಕಟ್ಟಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಮಹಬೂಬಾಬಾದ್‌ ಎಂಬಲ್ಲಿನ ದೋರ್ನಕಲ್‌ ನಲ್ಲಿ ರೂ 20 ಕೋಟಿ ವೆಚ್ಚದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಚರ್ಚ್‌ ನಿರ್ಮಿಸಿದ್ದರು,ʼʼ ಎಂದು ಎರಡನೇ ಬಾರಿ ಸರಪಂಚರಾಗಿ ಆಯ್ಕೆಯಾಗಿರುವ ಶೇಖ್‌ ಮೀರಾ ಹೇಳುತ್ತಾರೆ.

ಶೇಖ್‌ ಅವರ ಕಾರ್ಯವನ್ನು ರಾಜ್ಯ ಸಚಿವ ಕೆ ಟಿ ರಾಮ ರಾವ್‌ ಟ್ವೀಟ್‌ ಮಾಡಿ  ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News