×
Ad

ದ.ಕ.ಜಿಲ್ಲೆಯ ವಿವಿಧಡೆ ಉತ್ತಮ ಮಳೆ; ಮಂಗಳೂರಿನಲ್ಲಿ ಕೃತಕ ನೆರೆ

Update: 2022-06-21 20:36 IST

ಮಂಗಳೂರು : ಕೆಲವು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆಯು ಮಂಗಳವಾರ ಮಧ್ಯಾಹ್ನದ ಬಳಿಕ ಬಿರುಸು ಪಡೆದಿದ್ದು, ದ.ಕ.ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಈ ಮಧ್ಯೆ ಸ್ಮಾರ್ಟ್ ಸಿಟಿ ಅವಾಂತರದಿಂದಾಗಿ ನಗರದ ಕೆಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಸೋಮವಾರ ರಾತ್ರಿಯಿಂದ ಆರಂಭವಾದ ಮಳೆ ಮುಂಜಾನೆವರೆಗೆ ಬಿಡದೆ ಸುರಿದಿತ್ತು, ಬಳಿಕ ಸ್ವಲ್ಪ ಕಡಿಮೆಯಾಗಿತ್ತು. ಮಧ್ಯಾಹ್ನದ ಬಳಿಕ ಮಳೆ ಬಿರುಸು ಪಡೆದಿದ್ದು, ರಾತ್ರಿವರೆಗೂ ಸತತವಾಗಿ ಸುರಿದಿದೆ.

ಕರಾವಳಿಯಲ್ಲಿ ಮಂಗಳವಾರ ಸಂಜೆ ವೇಳೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಬುಧವಾರ ಮುಂಜಾನೆವರೆಗೆ ಇದು ಮುಂದುವರಿಲಿದೆ. ಶುಕ್ರವಾರದವರೆಗೆ ಆರೆಂಜ್ ಅಲರ್ಟ್ ಇದೆ. ಇದರಿಂದ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಸಮುದ್ರದಲ್ಲಿ ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯೂ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ೨೭.೨ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮಳೆಯಿಂದಾಗಿ ಸಾಮಾನ್ಯಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕನಿಷ್ಠ ತಾಪಮಾನ ೨೨.೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಂಗಳೂರಿನ ಕೆಲವು ಕಡೆ ಕೃತಕ ನೆರೆ

ನಗರದ ವಿವಿಧೆಡೆ ಒಳಚರಂಡಿ, ನೀರಿನ ಪೈಪ್‌ಲೈನ್, ಗ್ಯಾಸ್‌ಪೈಪ್ ಲೈನ್ ಎಂದೆಲ್ಲಾ ರಸ್ತೆ ಅಗೆದು ಹಾಕಿದ ಕಾರಣ ಮಂಗಳವಾರ ಸುರಿದ ಸತತ ಮಳೆಯ ಹಿನ್ನೆಲೆಯಲ್ಲಿ ಸ್ಟೇಟ್‌ಬ್ಯಾಂಕ್ ಸಮೀಪದ ರಾವ್ ಆ್ಯಂಡ್ ರಾವ್ ಸರ್ಕಲ್ ಮತ್ತು ಬಂದರ್ ಪ್ರದೇಶಗಳಲ್ಲಿ ಕೃತಕ ನೆರೆಯಾಗಿದೆ.

ಸ್ಟೇಟ್‌ಬ್ಯಾಂಕ್, ಬಂದರು ಪರಿಸರದಲ್ಲಿ ಒಳಚರಂಡಿಗಾಗಿ ಹಲವು ಕಡೆ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕಾರಣ ಕೃತಕ ನೆರೆ ಸೃಷ್ಟಿಯಾಗಿದೆ. ರಸ್ತೆಗಿಂತ ತಗ್ಗು ಪ್ರದೇಶದಲ್ಲಿದ್ದ ಕೆಲವು ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ನಗರದ ಮಂಗಳಾದೇವಿ ಗುಜ್ಜರಕೆರೆ ಬಳಿಯ ಅರೆಕೆರೆ ಬೈಲು ಪರಿಸರದಲ್ಲಿ ಮಳೆಯಿಂದಾಗಿ ಒಳಚರಂಡಿ ಮ್ಯಾನ್‌ ಹೋಲ್‌ಗಳಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿದು ಹೋಗಿದೆ. ನಗರದ ಅಂಬೇಡ್ಕರ ವೃತ್ತ, ಗಣಪತಿ ಹೈಸ್ಕೂಲ್ ರಸ್ತೆ, ಪಂಪ್‌ವೆಲ್, ಪಡೀಲ್, ಕೊಟ್ಟಾರ ಚೌಕಿ ಮತ್ತಿತರ ಕಡೆಗಳಲ್ಲಿ ರಸ್ತೆಗಳಲ್ಲೇ ನೀರು ಹರಿದು ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News