‘ಗ್ರಾಮ ಒನ್’ನಿಂದ ಅತ್ಯುತ್ತಮ ಸೇವೆ: ಪೊನ್ನುರಾಜ್

Update: 2022-06-21 16:33 GMT

ಮಂಗಳೂರು : ಸಾಮಾನ್ಯ ಸೇವಾ ಕೇಂದ್ರಗಳಿಗಿಂತಲೂ ಅತ್ಯುತ್ತಮವಾದ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಆರಂಭಿಸಲಾಗಿದ್ದು, ಇದು ಮುಖ್ಯಮಂತ್ರಿಗಳ ಅತಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ರಾಜ್ಯ ಸರಕಾರದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಹೇಳಿದರು.

ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಒನ್ ಆಪರೇಟರ್‌ಗಳ ತರಬೇತಿ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮ ಒನ್‌ನಲ್ಲಿ ಸರಕಾರದ ಸುಮಾರು ೮೦೦ ಸೇವೆಗಳನ್ನು ಗ್ರಾಮಸ್ಥರಿಗೆ ನೀಡುವ ಉದ್ದೇಶ ಹೊಂದಲಾಗಿದೆ. ಅದರಲ್ಲಿ ಫಲಾನಭವಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವುದರ ಜತೆಗೆ ಸರಕಾರದ ವಿವಿಧ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅರ್ಹರಿಗೆ ತಲುಪಿಸಲಾಗುವುದು. ಆದರೆ ಪ್ರತ್ಯೇಕವಾಗಿ ಖಾಸಗಿಯಾಗಿ ಸೇವೆ ಸಲ್ಲಿಸುವ ಅವಕಾಶವಿರುವುದಿಲ್ಲ, ಪ್ರಾರಂಭದಲ್ಲಿ ಫ್ರಾಂಚೈಸಿಗಳು ಕಡಿಮೆಯಿದ್ದಲ್ಲಿ ಅದರ ಸಂಖ್ಯೆಗಳನ್ನು ಹೆಚ್ಚು ಮಾಡಲಾಗು ವುದು ಎಂದರು.

ಗ್ರಾಮ ಒನ್‌ನಲ್ಲಿ ಬಸ್, ರೈಲು ಟಿಕೇಟ್, ವಾಹನಗಳ ವಿಮೆ ಸಹಿತ ವಿವಿಧ ರೀತಿಯ ವಿಮೆಗಳನ್ನು ಮಾಡಿಸು ವುದು ಹಾಗೂ ಬ್ಯಾಂಕಿಂಗ್ ವಹಿವಾಟಿಗೆ ಅನುಕೂಲ ಮಾಡಿಕೊಡುವಂತಹ ಅವಕಾಶಗಳನ್ನು ಮುಂದೆ ಕಲ್ಪಿಸಿಕೊಡಲಾಗುವುದು. ಈ ಕೇಂದ್ರಗಳು ಸರಕಾರದ ಕಚೇರಿಗಳಂತೆ ಸೇವೆ ನೀಡುವ ವಾತಾವರಣ ಹೊಂದಿರ ಬೇಕು ಎಂದು ಹೇಳಿದರು.

ಸರಕಾರದಿಂದ ನೀಡಲಾಗುವ ಸೇವೆ ಒದಗಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ. ಈ ಕೇಂದ್ರಗಳಲ್ಲಿ ಸರಕಾರಿ ಹಾಗೂ ಖಾಸಗಿ ಸೇವೆ ನೀಡುವ ಪಟ್ಟಿಯನ್ನು ನೀಡಲಾಗುವುದು. ಅದರಂತೆಯೇ ಕಾರ್ಯನಿರ್ವಹಿಸಬೇಕು. ಲೈಸೆನ್ಸ್ ಪಡೆದವರು ಮಾತ್ರ ಈ ಕೇಂದ್ರಗಳನ್ನು ನಡೆಸಬೇಕು ಎಂದು ಪೊನ್ನುರಾಜ್ ಸೂಚಿಸಿದರು.

ದಿನದಲ್ಲಿ ೧೨ ತಾಸು ಕೆಲಸ ನಿರ್ವಹಿಸಬೇಕು ಹಾಗೂ ಎಲ್ಲಾ ದಿನಗಳಲ್ಲಿಯೂ ಕೆಲಸ ಮಾಡಲು ಶಕ್ತರಾಗಿರಬೇಕು. ವಾರಕ್ಕೆ ಒಂದು ರಜೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಒಟ್ಟಾರೆ ಸರಕಾರಿ ಕಚೇರಿಯಂತೆ ಸೇವೆ ನೀಡುವ ಜನಸೇವ ಕೇಂದ್ರಗಳಾಗಿ ಇವು ಹೊರಹೊಮ್ಮಬೇಕು ಎಂಬುದು ಮುಖ್ಯಮಂತ್ರಿಯ ಆಶಯವಾಗಿದೆ ಎಂದು ಪೊನ್ನುರಾಜ್ ಹೇಳಿದರು.

ಗ್ರಾಮಗಳಿರುವ ಜನಸಂಖ್ಯೆಯ ಆಧಾರದ ಮೇಲೆ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ, ಗ್ರಾಮೋಣ ಪ್ರದೇಶದಲ್ಲಿ ಉದ್ಯೋಗವಕಾಶ ಒದಗಿಸುವುದು ಹಾಗೂ ಆ ಮೂಲಕ ಸರಕಾರದ ಸೇವೆಗಳನ್ನು ಜನರಿಗೆ ತಲುಪಿಸುವುದು ಈ ಯೋಜನೆಯ ಚಿಂತನೆಯಾಗಿದೆ, ಮುಂದಿನ ದಿನಗಳಲ್ಲಿ ತಾಲೂಕುವಾರು ಪ್ರತ್ಯೇಕವಾಗಿ ಈ ರೀತಿಯ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಕುಮಾರ್, ಇಡಿಸಿಎಸ್ (ಡೈರೆಕ್ಟರ್ ಆಫ್ ಇಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್) ನಿರ್ದೇಶಕ ದಿಲೀಪ್ ಶಶಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಗ್ರಾಮ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News