14 ವರ್ಷದ ಹಿಂದಿನ ಪ್ರಕರಣ; ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿಗೆ ಜಾಮೀನು ರಹಿತ ವಾರಂಟ್

Update: 2022-06-22 04:31 GMT
ಜಯಂತ್ ಶೆಟ್ಟಿ

ಮಂಗಳೂರು : ಸಾಮಾಜಿಕ ಕಾರ್ಯಕರ್ತ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್ ಸುಮಾರು 14 ವರ್ಷದ ಹಿಂದೆ ಹೂಡಿದ ಖಾಸಗಿ ದಾವೆಯೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸತತ ಗೈರು ಹಾಜರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ರೌಡಿ ನಿಗ್ರಹ ದಳದ ಮುಖ್ಯಸ್ಥನಾಗಿದ್ದ ಜಯಂತ್ ಶೆಟ್ಟಿ ಮತ್ತವರ ಸಿಬ್ಬಂದಿ ವರ್ಗವು ಉಳ್ಳಾಲ ಪರಿಸರದಲ್ಲಿ ಅಮಾಯಕರ ವಿರುದ್ಧ ಪ್ರಹಾರ ಮಾಡುತ್ತಿತ್ತು. ಇದರ ವಿರುದ್ಧ ತಾನು ಕಾನೂನು ಹೋರಾಟ ನಡೆಸತೊಡಗಿದೆ. ಅದೇ ಕಾರಣಕ್ಕೆ 2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಅಂದಿನ ಇನ್‌ಸ್ಪೆಕ್ಟರ್ ಜಯಂತ್ ಶೆಟ್ಟಿ ತನ್ನನ್ನು ಬಂಧಿಸಿದ್ದರು. ಅಲ್ಲದೆ ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗಿತ್ತು. ಒಂದು ವಾರ ನ್ಯಾಯಾಂಗ ಬಂಧನದಲ್ಲಿದ್ದ ನಾನು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡು ಇನ್‌ಸ್ಪೆಕ್ಟರ್ ಜಯಂತ್ ಶೆಟ್ಟಿ ಮತ್ತು ಎಸ್ಸೈ ಶಿವಪ್ರಕಾಶ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೆ. ಪ್ರಕರಣ ಹೈಕೋರ್ಟ್‌ವರೆಗೂ ಸಾಗಿತ್ತು. ಈ ಮಧ್ಯೆ ತನ್ನ ದೂರನ್ನು ಮಂಗಳೂರು ನ್ಯಾಯಾಲಯವು ವಜಾಗೊಳಿಸಿತ್ತು. ಆದರೆ ತಾನು ಸತತ ಹೋರಾಟ ನಡೆಸಿದುದರ ಫಲವಾಗಿ ಶಿವಪ್ರಕಾಶ್ ಜಾಮೀನು ಪಡೆದರೆ, ಜಯಂತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಜೂ.20ರಂದು ನ್ಯಾಯಾಲಯವು ಜಯಂತ್ ಶೆಟ್ಟಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಎಂದು ಕಬೀರ್ ಉಳ್ಳಾಲ್ ಮಾಹಿತಿ ನೀಡಿದ್ದಾರೆ.

ಫಿರ್ಯಾದಿದಾರ ಕಬೀರ್ ಉಳ್ಳಾಲ್ ಪರವಾಗಿ ಹಿರಿಯ ನ್ಯಾಯವಾದಿ ಎಸ್.ಎಸ್. ಖಾಝಿ ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಂತ್ ಶೆಟ್ಟಿಯನ್ನು‌ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ನ್ಯಾಯವಾದಿ ಎಸ್.ಎಸ್.ಖಾಝಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News