ಕುಂದಾಪುರ: ಜೂ.೨೯ರಂದು ಸರಕಾರದಿಂದ ಬೃಹತ್ ಉದ್ಯೋಗ ಮೇಳ

Update: 2022-06-23 12:35 GMT

ಉಡುಪಿ, ಜೂ.೨೩:ಜಿಲ್ಲಾಡಳಿತ, ಜಿಪಂ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯೋಗ ವಿನಿಮಯ ಕಚೇರಿ ಉಡುಪಿ ಹಾಗೂ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ ಆಶ್ರಯದಲ್ಲಿ ಜೂ.೨೯ರಂದು ಬೃಹತ್ ಉದ್ಯೋಗ ಮೇಳವೊಂದನ್ನು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೋಟ, ಜೂ.೨೫ರಂದು ನಿಗದಿಯಾಗಿದ್ದ ಈ ಉದ್ಯೋಗ ಮೇಳವನ್ನು ಇದೀಗ ೨೯ರಂದು ನಡೆಸಲು ನಿರ್ಧರಿಸಲಾಗಿದ್ದು, ರಾಜ್ಯ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜಿವನೋಪಾಯ ಇಲಾಖೆಯ ಸಚಿವರಾಗಿರುವ ಡಾ.ಸಿ.ಎನ್. ಅಶ್ವಥ್‌ ನಾರಾಯಣ ಅವರು ಮೇಳವನ್ನು ಬೆಳಗ್ಗೆ ೯:೦೦ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದರು.

ಉಡುಪಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ನಿರುದ್ಯೋಗಿ ಯುವಕ, ಯುವತಿ ಯರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಈಗಾಗಲೇ ಆನ್‌ಲೈನ್ ಮೂಲಕ -https://udupi.nic.in- ಇಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಇದುವರೆಗೆ ೩೦೦ ಮಂದಿ ಉದ್ಯೋಗಾಕಾಂಕ್ಷಿಗಳು ಆಫ್‌ಲೈನ್‌ನಲ್ಲಿ ಹಾಗೂ ಸುಮಾರು ೧೨೦೦ರಷ್ಟು ಮಂದಿ ಆನ್‌ಲೈನ್‌ನಲ್ಲಿ ತಮ್ಮ  ಹೆಸರನ್ನು ನೊಂದಾವಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಉದ್ಯೋಗದಾತ ಪ್ರಮುಖ ಕಂಪೆನಿಗಳಾದ ಟಯೋಟ, ಕಿರ್ಲೋಸ್ಕರ್, ಹಾಂಡೈ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ೪೦ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದನ್ನು ಈಗಾಗಲೇ ದೃಢ ಪಡಿಸಿವೆ. ವಿವಿಧ ದರ್ಜೆಯ ೩,೫೦೦ಕ್ಕೂ ಅಧಿಕ ಹುದ್ದೆಗಳು ಲಭ್ಯವಿರಲಿದೆ  ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್ ತಿಳಿಸಿದರು.

ಮೇಳದಲ್ಲಿ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಬಿ.ಇ.(ಇಂಜಿನಿಯರಿಂಗ್), ಸ್ನಾತಕೋತ್ತರ ಪದವಿ ಪಡೆದ ಉದ್ಯೋಗಾಂಕ್ಷಿ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು ತಮ್ಮ ಸ್ವ-ವಿವರ (ಬಯೋಡೇಟಾ), ಪೋಟೊ, ಅಂಕ ಪಟ್ಟಿಯೂ ಸೇರಿದಂತೆ ಎಲ್ಲಾ ದಾಖಲೆಗಳ ತಲಾ ಮೂರು ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ನಂ.೨೦೧, ಬಿ ಬ್ಲಾಕ್, ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಉಡುಪಿ ಇವರನ್ನು (ಮೊಬೈಲ್: ೯೯೪೫೮೫೬೬೭೦, ೯೪೪೯೯೯೪೩೮೮೨, ೯೯೦೧೪೮೧೭೨೯, ೯೪೮೩೭೭೨೪೪೯) ಸಂಪರ್ಕಿಸಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News