ಸಂಸ್ಕೃತಿ, ಪರಂಪರೆ ಕಡೆಗಣಿಸಿದ್ದ ಪಠ್ಯ ಮರುಪರಿಷ್ಕರಣೆ ತಪ್ಪೇನು: ಸಚಿವ ಆರ್.ಅಶೋಕ್ ಪ್ರಶ್ನೆ

Update: 2022-06-23 14:20 GMT

ಬೆಂಗಳೂರು, ಜೂ. 23: ‘ಪರಿಷ್ಕೃ ತ ಪಠ್ಯ ಪುಸ್ತಕದಲ್ಲಿ ‘ಸಂವಿಧಾನ ಶಿಲ್ಪಿ' ಉಲ್ಲೇಖವೂ ಸೇರಿದಂತೆ ಏಳೆಂಟು ಸಣ್ಣಪುಟ್ಟ ಲೋಪಗಳಿದ್ದು ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲು ಸರಕಾರ ಕ್ರಮ ವಹಿಸಿದೆ. ಆದರೆ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮೊಗಲರ ವೈಭವೀಕರಣ, ಹಿಂದೂಗಳ ಕಡೆಗಣನೆ ಮಾಡಿದ್ದನ್ನು ನಾವು ಸರಿಪಡಿಸಿದ್ದು, ಸಂಸ್ಕೃತಿ, ಪರಂಪರೆಯ ಅಂಶಗಳನ್ನು ಸೇರ್ಪಡೆ ಮಾಡಿ ಪಠ್ಯ ಪರಿಷ್ಕರಣೆ ಮಾಡಿರುವುದರಲ್ಲಿ ತಪ್ಪೇನಿದೆ?' ಎಂದು ಕಂದಾಯ ಸಚಿವ ಆರ್.ಅಶೋಕ್  ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷ್ಕೃತ ಪಠ್ಯದಲ್ಲಿ ಕೈಬಿಟ್ಟಿರುವ ಸಮಾಜ ಸುಧಾರಕರಾದ ಬಸವಣ್ಣ, ಕುವೆಂಪು, ಅಂಬೇಡ್ಕರ್, ಆದಿಚುಂಚನಗಿರಿ ಶ್ರೀಗಳಿಗೆ ಸಂಬಂಧಿಸಿದ ವಿಷಯಗಳಲ್ಲಿನ ಲೋಪವನ್ನು ಸರಿಪಡಿಸಿ ಪಠ್ಯ ಪುಸ್ತಕಕ್ಕೆ ಮರು ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ' ಎಂದು ಮಾಹಿತಿ ನೀಡಿದರು.

‘ಈ ಹಿಂದೆ ಸಿದ್ದರಾಮಯ್ಯರ ಅವಧಿಯಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಹಿಂದೂ, ಹಿಂದೂ ಸಂಸ್ಕೃತಿ, ಧರ್ಮ, ದೇವರು, ಹಿಂದೂ ರಾಜಮಹಾರಾಜರುಗಳು ವಿಚಾರಗಳನ್ನು ಕೈಬಿಟ್ಟಿತ್ತು. ಇದೀಗ ಆ ಅಂಶಗಳು ಸೇರಿದಂತೆ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ನಾವು ಸೇರಿಸಿದ್ದೇವೆ. ಅವರ ಕಾಲದಲ್ಲಿ 500ಕ್ಕೂ ಹೆಚ್ಚು ತಪ್ಪುಗಳಿದ್ದವು. ಆ ಬಳಿಕ ಸರಿಪಡಿಸಿ ಪಠ್ಯ ಪುಸ್ತಕಗಳನ್ನು ನೀಡಿದ್ದರು. ಇದೀಗ ಆಗಿರುವ ಏಳೆಂಟು ತಪ್ಪುಗಳಿದ್ದು, ಅದನ್ನೆ ದೊಡ್ಡದಾಗಿ ಬಿಂಬಿಸಿ, ಮೂಲ ಹಳೆಯ ಪಠ್ಯವನ್ನು ಮುಂದುವರಿಸಲು ಆಗ್ರಹಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಕೈಬಿಟ್ಟಿದ್ದು ಅವರೇ ಹೊರತು, ನಾವಲ್ಲ: ‘ರಾಷ್ಟ್ರಕವಿ ಕುವೆಂಪು ಅವರ ‘ಅನಲೆ' ಶ್ರೀರಾಮಾಯಣ ದರ್ಶನಂ ಕುರಿತ ಗದ್ಯ, ‘ಅಜ್ಜಯ್ಯನ ಅಭ್ಯಂಜನ' ಸೇರಿದಂತೆ ಹಲವು ಪಠ್ಯಗಳನ್ನು ಕೈಬಿಟ್ಟಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ. ಬೆಂಗಳೂರು ಪರಿಚಯಿಸುವ ಪಾಠದಲ್ಲಿ ನಾಡಪ್ರಭು ಕೆಂಪೇಗೌಡ ಉಲ್ಲೇಖವಿರಲಿಲ್ಲ. ರಾಷ್ಟ್ರಧ್ವಜ ಕುರಿತ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ, ನಾಡಿನ ಅಭಿಮಾನದ ಗೀತೆ ‘ಚೆಲುವ ಕನ್ನಡ ನಾಡಿದು' ಎಂಬ ಗೀತೆ ತೆಗೆಯಲಾಗಿತ್ತು'.

‘ಮೈಸೂರು ನಗರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹರಡಿದೆ. ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಿ ಮೈಸೂರು ಮನೆತನದ ಆಧಿದೇವತೆ ಎಂಬ ಪ್ರಮುಖ ಅಂಶಗಳನ್ನು ತೆಗೆಯಲಾಗಿತ್ತು. ದೇವಾಲಯ ಚಿತ್ರಗಳನ್ನು, ಮಥುರ ಶ್ರೀ ಕೃಷ್ಣ ಮಂದಿರ ಮತ್ತು ಸೋಮನಾಥ ದೇವಾಲಯದ ಅಂಶಗಳನ್ನು ಕೈಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳ ಕಡೆಗಣಿಸಲಾಗಿತ್ತು. ದಿಲ್ಲಿ ಸುಲ್ತಾನರ ಕಾಲದ ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈ ಬಿಡಲಾಗಿತ್ತು. ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿಸಿದ್ದರು.

ಮಹಾತ್ಮ ಗಾಂಧಿಯವರ ಭಾರತ-ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೊಲ್ಕತ್ತಾದಲ್ಲಿ ‘ಗೀತೆ'ಯನ್ನು ಪಠಿಸುತ್ತಿದ್ದರೆಂಬ ಅಂಶವನ್ನು ಕೈಬಿಟ್ಟಿದ್ದರು. ಮತೀಯ ಯುದ್ಧಗಳ ಕುರಿತಾದ ಅಂಶಗಳಿಗೂ ಕತ್ತರಿ ಹಾಕಲಾಗಿತ್ತು. ಶಿವಾಜಿ ಮಹಾರಾಜರ ಉಲ್ಲೇಖ ಕೈ ಬಿಡಲಾಗಿದ್ದು, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶಗಳನ್ನು ತೆಗೆಯಲಾಗಿದೆ. ರಜಪೂತರ ಗುಣಧರ್ಮಗಳನ್ನು ಕೈಬಿಟ್ಟು ಮೊಘಲರಿಗೆ ಆದ್ಯತೆ ನೀಡಿದ್ದರು. ಟಿಪ್ಪುವಿನ ಅತಿಯಾದ ವೈಭವೀಕರಣ ಮಾಡಲಾಗಿದೆ' ಎಂದು ಅಶೋಕ್ ವಿವರಿಸಿದರು.

ಒಡೆಯರ್ ಕಡಗಣನೆ: ‘ಪಠ್ಯಪುಸ್ತಕದಲ್ಲಿ ಮೈಸೂರಿನ ಒಡೆಯರನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣ, ಹಿಂದೂಗಳ ಕಡೆಗಣನೆ, ಮುಸ್ಲಿಮರ ಓಲೈಕೆ, ರಾಷ್ಟ್ರಪ್ರೇಮದ ಕಡೆಗಣನೆ ಮಾಡಿದ್ದು ಸಿದ್ದರಾಮಯ್ಯ ಸರಕಾರ. ದೇಶದಲ್ಲಿಯೇ ಹೆಮ್ಮೆಯ ಕನ್ನಂಬಾಡಿ ಕಟ್ಟೆ, ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ, ಮೈಸೂರು ವಿವಿ, ಮೈಸೂರು ಬ್ಯಾಂಕ್ ಹೀಗೆ ಅನೇಕ ವಿಧದಲ್ಲಿ ಕೊಡುಗೆ ನೀಡಿದ ಮೈಸೂರಿನ ರಾಜವಂಶ ಒಡೆಯರು ಕುರಿತ ಪಾಠವನ್ನು ಬಿಜೆಪಿ ಸರಕಾರ 6ನೆ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಳವಡಿಸಿತ್ತು. ಆ ಪಾಠವನ್ನು ಕೈಬಿಡಲಾಗಿತ್ತು' ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

ಸನಾತನ ಧರ್ಮ ಪಾಠ ಸೇರ್ಪಡೆ: ‘ಭಾರತ ನಮ್ಮ ಹೆಮ್ಮೆ' ಎಂಬ ಪಾಠವನ್ನು ದೇಶದ ಬಗ್ಗೆ ಅಭಿಮಾನ ಮೂಡಿಸಲು 6ನೆ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರ್ಪಡೆ, ಮುಡಂಬಡಿತ್ತಾಯ ಸಮಿತಿ ರಚನೆಯಲ್ಲಿ ಇಲ್ಲದ ‘ಇತಿಹಾಸ ಪರಿಚಯ' ಎಂಬ ಪಾಠವನ್ನು 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸಿದ್ದರಾಮಯ್ಯ ಸರಕಾರ ಸಮಿತಿಯಿಂದ ಸೇರಿಸಲಾಗಿತ್ತು. ಈ ಅಧ್ಯಾಯದಲ್ಲಿ ಪೂರ್ಣ ಪಾಶ್ಚಿಮಾತ್ಯ ಇತಿಹಾಸಕಾರರ ಮಾಹಿತಿ ಸೇರಿಸಲಾಗಿತ್ತು. ಆದುದರಿಂದ ಪ್ರಸ್ತುತ ಸಮಿತಿ ಈ ಪಾಠವನ್ನು ಪೂರ್ಣವಾಗಿ ಕೈಬಿಟ್ಟಿದೆ.

ಭಾರತೀಯತೆ ಕುರಿತ ಕೆ.ಎಸ್.ನರಸಿಂಹಸ್ವಾಮಿ ಅವರ ‘ಭಾರತೀಯತೆ' ಕವನವನ್ನು ಸಿದ್ದರಾಮಯ್ಯ ಸರಕಾರದಲ್ಲಿ ಕೈಬಿಟ್ಟಿತ್ತು. ಈಗ ಮರು ಸೇರ್ಪಡೆ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರುಸೇರ್ಪಡೆ ಮಾಡಲಾಗಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಸಮರ್ಥವಾಗಿ ಮತ್ತು ಜನಾನುರಾಗಿಯಾಗಿ 54 ವರ್ಷಗಳವರೆಗೆ (ಕ್ರಿ.ಶ. 1552ರಿಂದ 1606) ಆಳಿದ ಚೆನ್ನಭೈರಾದೇವಿ ಕನ್ನಡ ರಾಣಿಯ ವಿರುದ್ಧ ಪದೇ ಪದೇ ಯುದ್ಧ ಮಾಡಿ ಸೋತ ಪೋರ್ಚುಗೀಸರಿಂದಲೇ ‘ಕಾಳುಮೆಣಸಿನ ರಾಣಿ' ಎಂಬ ಹೆಗ್ಗಳಿಕೆಯನ್ನು ಪಡೆದ ಚೆನ್ನಭೈರಾದೇವಿ ರಾಣಿಯವರ ಪಾಠ ಸೇರ್ಪಡೆ ಮಾಡಿದೆ. ಏಣಗಿ ಬಾಳಪ್ಪರವರ ಜೀವನ ಪರಿಚಯ ನೀಡುವ ‘ನನ್ನ ಬಾಲ್ಯ' ತೆಗೆಯಲಾಗಿತ್ತು, ಸೇರ್ಪಡೆ ಮಾಡಿದೆ. ಪಠ್ಯದಲ್ಲಿ ವಿವೇಕಾನಂದರ ಜನ್ಮದಿನದ ಕುರಿತು ಪಾಠ ಸೇರ್ಪಡೆಗೊಳಿಸಲಾಗಿದೆ. 

ಕ್ರೈಸ್ತ, ಇಸ್ಲಾಂ, ಜೈನ, ಬೌದ್ಧ ಮತಗಳ ಬಗ್ಗೆ 8ನೆ ತರಗತಿ ಸಮಾಜವಿಜ್ಞಾನದಲ್ಲಿ ಓದುತ್ತಿದ್ದರು. ಆದರೆ, ಇವೆಲ್ಲಕ್ಕೂ ಹಿಂದಿನ ಸನಾತನ ಧರ್ಮದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಸ್ತುತ ಸನಾತನ ಧರ್ಮ ಎಂಬ ಪಾಠವನ್ನು 8ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಿದೆ. ಸ್ಥಳೀಯ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಬಳಕೆಗೆ ಉತ್ತೇಜಿಸುವ ‘ಸ್ವದೇಶಿ ಸೂತ್ರದ ಸರಳ ಹಬ್ಬ' ಪಠ್ಯವನ್ನು ಸೇರಿಸಲಾಗಿದೆ. ಹಬ್ಬಗಳ ಆಚರಣೆ ಸೇರಿದಂತೆ ವಿದೇಶಿ ವಸ್ತುಗಳ ಅವಲಂಬನೆ ಕಡಿಮೆ ಮಾಡಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಹಾಗೂ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಬ್ಬ ಹರಿದಿನಗಳು ಹೇಗಿದ್ದವು ಎಂಬ ಉಲ್ಲೇಖಿಸಲಾಗಿದೆ.

ಭೈರಪ್ಪ ಪಠ್ಯ ಸೇರ್ಪಡೆ: ‘ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆಸರಾಂತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಬರೆದ ಯಾವುದೇ ಬರಹ ಪಠ್ಯ ಪುಸ್ತಕದಲ್ಲಿ ಇರಲಿಲ್ಲ. ಪ್ರಸ್ತುತ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ‘ನಾನು ಕಂಡಂತೆ ಬಿಜಿಎಲ್ ಸ್ವಾಮಿ’ ಎಂಬ ಬರಹ ಸೇರ್ಪಡೆಗೊಳಿಸಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಮಂಜೇಶ್ವರ ಗೋವಿಂದ ಪೈ ಅವರ ಬರಹ ‘ನಾನು ಪ್ರಾಸ ಬಿಟ್ಟ ಕಥೆ'ಯನ್ನು ಮರು ಸೇರ್ಪಡೆ ಮಾಡಲಾಗಿದೆ. ಕ್ರೈಸ್ತ ಮತ್ತು ಇಸ್ಲಾಂ ಧರ್ಮ ಎಂಬ ಅಧ್ಯಾಯವನ್ನು ಪಾಶ್ಚಾತ್ಯ ಧರ್ಮಗಳು ಎಂದು ಬದಲಾಯಿಸಿ, ಯಹೂದಿ, ಫಾರ್ಸಿ ಧರ್ಮಗಳ ವಿಷಯಾಂಶಗಳನ್ನು ಹೊಸದಾಗಿ ಸೇರಿಸಿದೆ. ಆ ಧರ್ಮಗಳ ಅನುಯಾಯಿಗಳು ಭಾರತದಲ್ಲಿರುವುದರಿಂದ ಮಕ್ಕಳಿಗೆ ಈ ಧರ್ಮಗಳನ್ನು ಪರಿಚಯಿಸುವ ದೃಷ್ಟಿಯಿಂದ ಸೇರ್ಪಡೆ ಮಾಡಲಾಗಿದೆ.

ಪಾಠ ಕೈಬಿಟ್ಟಿಲ್ಲ: ‘ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು' ಈ ಪಾಠದಲ್ಲಿ ಬರಗೂರು ಸಮಿತಿ ಕೈಬಿಟ್ಟಿದ್ದ ಮೈಸೂರು ಒಡೆಯರ್ ರಾಜವಂಶದ ವಿಷಯವನ್ನು ವಿವರವಾಗಿ ಪರಿಚಯಿಸಲಾಗಿದೆ. ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿ' ಈ ಪಾಠದಲ್ಲಿದ್ದ ನಾರಾಯಣ ಗುರು ವಿಷಯವನ್ನು 7ನೆ ತರಗತಿ ಸಮಾಜ ವಿಜ್ಞಾನದಲ್ಲಿ ಹಾಗೂ 10ನೆ ತರಗತಿಯ ಕನ್ನಡದ ಪಠ್ಯಪುಸ್ತಕದಲ್ಲಿ ಸೇರಿಸಿದೆ. ‘ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಪಾಠಗಳನ್ನು ಕೈಬಿಟ್ಟಿಲ್ಲ. ಸಮಾಜ ವಿಜ್ಞಾನದಲ್ಲಿ ಪಠ್ಯದ ಹೊರೆ ಹೆಚ್ಚಾಗಿದ್ದ ಕಾರಣ, ಈ ಮಹನೀಯರನ್ನೊಳಗೊಂಡ ಪಾಠವನ್ನು ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿ ಸೇರಿಸಿದೆ' ಎಂದು ಅವರು ಹೇಳಿದರು.

ಹೆಡಗೇವಾರರ ಪಠ್ಯ ಏಕಿರಬಾರದು: ‘ಹತ್ತನೆ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿ ಆದರ್ಶ ಪುರುಷ ಯಾರಾಗಬೇಕು ಎಂಬ ಪಾಠವನ್ನು ಸೇರಿಸಲಾಗಿದೆ. ಈ ಪಾಠದ ವಿಷಯಾಂಶವು ಕೇಶವ ಬಲಿರಾಮ ಹೆಡಗೇವಾರರ ಬಗ್ಗೆ ಇರುವ ವಿಷಯಾಂಶಗಳು ಆಗಿರುವುದಿಲ್ಲ. ‘ನಿಜವಾದ ಆದರ್ಶ ಪುರುಷ ಯಾರಾಗಿರಬೇಕು'? ಎಂಬ ಅವರ ಲೇಖನ ಪಠ್ಯಕ್ಕೆ ಸೇರ್ಪಡೆ ಮಾಡಲಾಗಿದೆ. ಹೆಡಗೇವಾರರ ಬಗ್ಗೆ ಇದ್ದರೆ ತಪ್ಪೇನು? ಎಂದು ಸಚಿವ ಅಶೋಕ್ ಪ್ರಶ್ನಿಸಿದರು.

ತನಿಖೆ ಮಾಡಿದ್ದು ನಾವು: ‘ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿದ ಪ್ರಕರಣ 2017ರಲ್ಲಿ ನಡೆದದ್ದು, ಆದೂ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ. ಆ ಪದ್ಯವನ್ನು ರೋಹಿತ್ ಚಕ್ರತೀರ್ಥ ಶೇರ್ ಮಾಡಿದ್ದರು. ಈ ವಿಷಯ ಅಂದು ವಿವಾದವಾಗಿ ಪೊಲೀಸ್ ದೂರು ಆಗಿತ್ತು. ಪೊಲೀಸ್ ತನಿಖೆ ನಡೆದು ‘ಬಿ ರಿಪೋರ್ಟ್' ಸಲ್ಲಿಸಲಾಗಿದೆ. ನಾಡಗೀತೆಗೆ ಅವಮಾನ ಮಾಡಿದ ಮೂಲ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಿ, ಪತ್ತೆ ಹಚ್ಚಲಾಗದ ಸಿದ್ದರಾಮಯ್ಯ ಈಗ ವಿವಾದ ಮಾಡುತ್ತಿರುವುದು ದುರುದ್ದೇಶಪೂರಿತ. ಆದರೆ, ಇದೀಗ ನಮ್ಮ ಸರಕಾರದ ಅವಧಿಯಲ್ಲಿ ನಾಡಗೀತೆ ತಿರುಚಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ' ಎಂದು ಅಶೋಕ್ ಹೇಳಿದರು.

ಗೌಡರಿಗೆ ಸಿಎಂ ಉತ್ತರ: ‘ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರ ದೇವೇಗೌಡ ಅವರು ನಮ್ಮ ಹಿರಿಯ ಮುಖಂಡರು. ಜೊತೆಗೆ ಅವರು ತಮ್ಮ ಸಮುದಾಯದ ಹಿರಿಯರು. ಅವರ ಬರೆದಿರುವ ಪತ್ರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಅವರಿಗೆ ಸೂಕ್ತ ಉತ್ತರವನ್ನು ಸಿಎಂ ಅವರೇ ಒಂದೆರಡು ದಿನಗಳಲ್ಲಿ ನೀಡಲಿದ್ದಾರೆ'

-ಆರ್.ಅಶೋಕ್ ಕಂದಾಯ ಸಚಿವ

ಆದೇಶ ಮಾಡಿಯೇ ಪರಿಷ್ಕರಣೆ: ‘ಒಂದರಿಂದ 10ನೆ ತರಗತಿ ಕನ್ನಡ ವಿಷಯದ ಪಠ್ಯ ಪುಸ್ತಕ ಹಾಗೂ 6ರಿಂದ 10ನೆ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿನ ಅಲ್ಪಮಟ್ಟದ ಪರಿಷ್ಕರಣೆಯನ್ನು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಯಿಸಿ ಪಠ್ಯಪುಸ್ತಕ ಸಂಘದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸರಕಾರಿ ಆದೇಶವನ್ನು ಪರಿಷ್ಕøತಗೊಂಡ ಪಠ್ಯಗಳನ್ನು ಮುದ್ರಿಸುವ ಹಂತದಲ್ಲೇ ಸರಕಾರ ಆದೇಶ ಮಾಡಿ, ಮುದ್ರಿಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ'

-ಆರ್.ಅಶೋಕ್ ಕಂದಾಯ ಸಚಿವ

ಹಿಂದೂ ಮಲಗಿದರೆ ದೇಶ ಮಲಗುತ್ತೆ

‘ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ತಮಗೆ ಬೇಕಾದ ಅಜೆಂಡಾಗಳನ್ನು ತುರುಕಿ ಪಠ್ಯ ಪುಸ್ತಕ ಮುದ್ರಣ ಮಾಡಿದ್ದರು. ಆಗ ಯಾವುದೇ ರೀತಿಯ ಚರ್ಚೆ ಆಗುತ್ತಿರಲಿಲ್ಲ. ಆದರೆ, ಇದೇ ಮೊದಲಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಚರ್ಚೆಯ ವಿಷಯ ಆಗಿದೆ. ಆ ಮೂಲಕ ಹೆಡಗೇವಾರ್ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತದೆ. ಹಿಂದೂ ಮಲಗಿದರೆ ದೇಶ ಮಲಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಹಿಂದಿನ ಪಠ್ಯದಲ್ಲಿ ಹಲವು ಕಡೆ ರಾಮ, ಕೃಷ್ಣ, ಶಿವಾಜಿ ಅವರನ್ನು ಕಡೆಗಣಿಸಲಾಗಿತ್ತು. ಅದನ್ನು ನಮ್ಮ ಸರಕಾರ ಮರು ಸೇರ್ಪಡೆ ಮಾಡಿದೆ'

-ಆರ್.ಅಶೋಕ್ ಕಂದಾಯ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News