ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಅಮೆರಿಕದ ಸಂಸತ್‌ ನಲ್ಲಿ ಭಾರತದ ವಿರುದ್ಧ ನಿರ್ಣಯ ಮಂಡಿಸಿದ ಇಲ್ಹಾನ್ ಉಮರ್

Update: 2022-06-23 14:35 GMT

ವಾಷಿಂಗ್ಟನ್,ಜೂ.23: ಭಾರತದಲ್ಲಿ ಮಾನವ ಹಕ್ಕುಗಳನ್ನು ಹಾಗೂ ಮುಸ್ಲಿಮರು, ಕ್ರೈಸ್ತರು, ಸಿಕ್ಖರು, ದಲಿತರು, ಆದಿವಾಸಿಗಳು ಮತ್ತು ಇತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಸ್ವಾತಂತ್ರವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿರುವ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸತ್ ಸದಸ್ಯೆ ಇಲ್ಹಾನ್ ಉಮರ್ ಅವರು ಅದನ್ನು ಖಂಡಿಸಿ ನಿರ್ಣಯವೊಂದನ್ನು ಮಂಗಳವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಂಡಿಸಿದ್ದಾರೆ. 

ಇಲ್ಹಾನ್ ಉಮರ್ ಮಿನ್ನೆಸೋಟಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ‘ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ’ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ನಿರ್ಣಯವು ಭಾರತವನ್ನು ‘ವಿಶೇಷ ಕಳವಳದ ದೇಶ’ ಎಂದು ಹೆಸರಿಸುವಂತೆ ವಿದೇಶಾಂಗ ಕಾರ್ಯದರ್ಶಿಗೆ ಕರೆ ನೀಡಿದೆ. ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತ ಆಯೋಗ (ಯುಎಸ್ಐಸಿಆರ್ಎಫ್)ವೂ ಈ ಶಿಫಾರಸನ್ನು ಮಾಡಿದೆ.

ನಿರ್ಣಯದ ಮಂಡನೆಯು ಅದನ್ನು ಸಕ್ರಿಯ ಪರಿಗಣನೆಗಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಅಥವಾ ಅಂಗೀಕರಿಸಲಾಗುತ್ತದೆ ಎಂದು ಅರ್ಥವಲ್ಲ. 

ಉಮರ್ ಮಂಡಿಸಿರುವ ನಿರ್ಣಯಕ್ಕೆ ಮಿಚಿಗನ್ ನ ಫೆಲೆಸ್ತೀನ್-ಅಮೆರಿಕನ ಸಂಸದೆ ರಶೀದಾ ತಲೀಬ್, ಮಸಾಚುಸೆಟ್ಸ್ನ ಸಂಸದ ಜಿಮ್ ಮೆಕ್ಗವರ್ನ್ ಮತ್ತು ಕ್ಯಾಲಿಫೋರ್ನಿಯಾದ ಜವಾನ್ ವಾರ್ಗಸ್ ಅವರು ಸಹಪ್ರಾಯೋಜಕರಾಗಿದ್ದಾರೆ. ಎಲ್ಲ ಮೂವರೂ ಡೆಮಾಕ್ರಟಿಕ್ಗಳಾಗಿದ್ದಾರೆ. ಉಮರ್ ಮತ್ತು ತಲೀಬ್ ಸದನಕ್ಕೆ ಆಯ್ಕೆಯಾಗಿರುವ ಮೊದಲ ಮುಸ್ಲಿಂ ಮಹಿಳೆಯರಾಗಿದ್ದಾರೆ.

ನಿರ್ಣಯವನ್ನು ಈಗ ಸದನದ ವಿದೇಶ ವ್ಯವಹಾರಗಳ ಸಮಿತಿಗೆ ಸಲ್ಲಿಸಲಾಗಿದ್ದು,ಅದನ್ನು ಪರಿಗಣಿಸಬೇಕೇ ಮತ್ತು ಬಳಿಕ ಅದನ್ನು ಪೂರ್ಣ ಸದನಕ್ಕೆ ಕಳುಹಿಸಬೇಕೇ ಎನ್ನುವುದನ್ನು ಸಮಿತಿಯು ನಿರ್ಧರಿಸಲಿದೆ. ನೂತನ ಸದನಕ್ಕೆ ನವೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು,ಸದನದ ಅವಧಿ ಅಂತ್ಯಗೊಳ್ಳುವ ಮುನ್ನ ನಿರ್ಣಯವನ್ನು ಕೈಗೆತ್ತಿಕೊಳ್ಳದಿದ್ದರೆ ಅದು ರದ್ದಾಗುತ್ತದೆ. 

ಯುಎಸ್ಐಸಿಆರ್ಎಫ್ ನ 2022ರ ವರದಿಯನ್ನು ನಿರ್ಣಯದಲ್ಲಿ ಉಲ್ಲೇಖಿಸಿರುವ ಉಮರ್, ಭಾರತ ಸರಕಾರವು ಹಿಂದು ರಾಷ್ಟ್ರದ ತನ್ನ ದೃಷ್ಟಿಯನ್ನು ವ್ಯವಸ್ಥಿತಗೊಳಿಸುವುದನ್ನು ಮತ್ತು ದೇಶದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪ್ರತಿಕೂಲವಾಗಿರುವುದನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ದೇಶದ್ರೋಹ ಕಾಯ್ದೆಯಂತಹ ಕಾನೂನುಗಳನ್ನು ಭೀತಿ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲು ಬಳಸಲಾಗುತ್ತಿದೆ ಎಂದೂ ಆರೋಪಿಸಿರುವ ಉಮರ್, ಸರಕಾರದಿಂದ ಧಾರ್ಮಿಕ ಅಲ್ಪಸಂಖ್ಯಾತ ನಾಯಕರು ಮತ್ತು ಧಾರ್ಮಿಕ ಬಹುತ್ವದ ಧ್ವನಿಗಳ ದಮನದ ಸಾಂಕೇತಿಕ ಪ್ರಕರಣಗಳಾಗಿ ದಿವಂಗತ ಕ್ರೈಸ್ತ ಧರ್ಮಗುರು ಹಾಗೂ ಸಾಮಾಜಿಕ ಕಾರ್ಯಕರ್ತ ಸ್ಟಾನ್ ಸ್ವಾಮಿ ಮತ್ತು ಬಂಧಿತ ಕಾಶ್ಮೀರಿ ಕಾರ್ಯಕರ್ತ ಖುರ್ರಂ ಪರ್ವೇಜ್ ಅವರ ಪ್ರಕರಣಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ,ಸಿಎಎ ಮತ್ತು ಎನ್ಆರ್ಸಿಯಿಂದ ಭಾರತೀಯ ಮುಸ್ಲಿಮರಿಗೆ ಅಪಾಯ,ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನೂ ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿದೆ.
 
ಸಾಂಕ್ರಾಮಿಕದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ತಮ್ಮನ್ನು ತಾರತಮ್ಯದಿಂದ ನಡೆಸಿಕೊಳ್ಳಲಾಗಿತ್ತು ಎಂದು ಭಾರತದಲ್ಲಿಯ ಮೂರನೇ ಒಂದು ಭಾಗದಷ್ಟು ಮುಸ್ಲಿಮರು ದೂರಿದ್ದಾರೆ ಎಂದು ಯುಎಸ್ಐಸಿಆರ್ಎಫ್ ವರದಿಯನ್ನು ಉಲ್ಲೇಖಿಸಿ ಆರೋಪಿಸಿರುವ ನಿರ್ಣಯವು,ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಸರಕಾರವು ಸಿಖ್ ರೈತರನ್ನು ಭಯೋತ್ಪಾದಕರು ಮತ್ತು ಧಾರ್ಮಿಕವಾಗಿ ಪ್ರೇರಿತ ಪ್ರತ್ಯೇಕತಾವಾದಿಗಳು ಎಂದು ಬಿಂಬಿಸಲು ಪ್ರಯತ್ನಿಸಿತ್ತು ಎಂದೂ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News