ಪ್ರತಿಭಟನೆ ವೇಳೆ ಗಲಭೆ ಸೃಷ್ಟಿದವರನ್ನು ಬಿಟ್ಟು ನಿರಪರಾಧಿಗಳ ಮೇಲೆ ಎಫ್‌ಐಆರ್; ಪೊಲೀಸ್ ಆಯುಕ್ತರಿಗೆ ದೂರು

Update: 2022-06-23 14:54 GMT

ಬೆಂಗಳೂರು, ಜೂ.23: ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ನಾಡಗೀತೆ ವಿರೂಪಗೊಳಿಸಿದ ಕಾರಣ ಅವನ ವಿರುದ್ಧ ಪೊಲೀಸ್ ಆಯುಕ್ತರಿಗೆ ಕನ್ನಡ ಪರ ಹೋರಾಟಗಾರ ಹರೀಶ್ ಭೈರಪ್ಪ ಮೊದಲು ದೂರು ನೀಡಿದ್ದು, ಅದರ ಸೇಡಿನ ಭಾಗವಾಗಿ ಜೂ.18ರಂದು ಪ್ರೀಡಂ ಪಾರ್ಕ್  ಗಲಭೆಯಲ್ಲಿ ಅನವಶ್ಯಕವಾಗಿ ಹರೀಶ್ ಭೈರಪ್ಪ ಮತ್ತು ದೀಪು ಗೌಡ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಎಂದು ವಿಶ್ವ ಮಾನವ ಕ್ರಾಂತ್ರಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಗುರುವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರನ್ನು ಸಮಿತಿಯ ಅಧ್ಯಕ್ಷ ಜೆ.ಟಿ. ಪಾಟೀಲ್, ಅಡಿಟರ್ ನಾಗರಾಜ್, ಕೆ.ಎಚ್. ಕುಮಾರ್ ಸೇರಿದಂತೆ ಪ್ರಗತಿಪರ ಬರಹಗಾರರ ನಿಯೋಗವು ಭೇಟಿ ಮಾಡಿ ದೂರು ನೀಡಿದೆ.

ಮಹನೀಯರನ್ನು ಅವಮಾನಿಸಲಾದ ರೋಹಿತ್ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿಷ್ಕರಣೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಜೂ.18ರಂದು ಪ್ರಟಿಭಟನೆ ಮಾಡಲಾಯಿತು. ಅಂದು ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಅಸಭ್ಯ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜುಗರ ಮಾಡುತ್ತಿದ್ದ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಭಿಕರು ವ್ಯಕ್ತಿಯ ವರ್ತನೆಯನ್ನು ಪ್ರಶ್ನಿಸಿದ್ದಕ್ಕಾಗಿ ಉದ್ಧಟತನದಿಂದ ಪ್ರತ್ಯುತ್ತರ ನೀಡಿದನು. ಈ ಸಮಯದಲ್ಲಿ ಸಮಾವೇಶದಲ್ಲಿದ್ದ ಜನರು ಆತನನ್ನು ವೇದಿಕೆಯಿಂದ ಹೊರಗೆ ದೂಡಲು ಯತ್ನಿಸಿದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು. ಹರೀಶ್ ಭೈರಪ್ಪ ಮತ್ತು ದೀಪು ಗೌಡ ಅದನ್ನು ತಿಳಿಗೊಳಿಸಲು ಮುಂದಾದಾಗ ಕಿಡಿಗೇಡಿ ಇಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದನು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಆತನನ್ನು ಎಳೆದೊಯ್ದರು. ಕಾರ್ಯಕ್ರಮ ಮುಗಿದ ನಂತರ ಸಮಿತಿಯ ಪರವಾಗಿ ಫ್ರೀಡಂಪಾರ್ಕ್ ಪೊಲೀಸ್ ಚೌಕಿಯಲ್ಲಿದ್ದ ಉಪ್ಪಾರಪೇಟೆ ಪೊಲೀಸ್ ಠಾಣೆ ಇನ್ಸ್ಕ್ಟರ್ ಅವರಿಗೆ ನಂತರ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಲಿಖಿತವಾಗಿ ದೂರು ನೀಡಲಾಯಿತು ಎಂದು ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಆದರೆ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಕಾರ್ಯಕ್ರಮದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿ ಹಲ್ಲೆಗೊಳಗಾದ ಹರೀಶ್ ಭೈರಪ್ಪ ಮತ್ತು ದೀಪು ಗೌಡ ವಿರುದ್ಧ ಜಾತಿ ನಿಂದನೆ ಮತ್ತು 307 ಐಪಿಸಿ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕಿಡಿಗೇಡಿ ವ್ಯಕ್ತಿಯ ಹೆಸರು ತೇಜು, ಟಿ. ಎಂದು ಅವನು ದೂರು ನೀಡಿದ ನಂತರ ತಿಳಿಯಿತು. ಈ ವ್ಯಕ್ತಿಯ ಪರವಾಗಿ ವಿಧಾನ ಪರಿಷತ್ ಸದಸ್ಯರು, ರಾಜಕಾರಣಿಗಳು, ಆಡಳಿತ ಪಕ್ಷದ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ಕನ್ನಡ ಪರ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 

“ನಾನು ನೀಡಿದ ದೂರಿನ ಆಧಾರದ ಮೇಲೆ ಕೇವಲ ಎನ್‌ಸಿಆರ್ ಮಾಡಿದ್ದು, ತಾವು ಉಪ್ಪಾರಪೇಟೆ ಪೊಲೀಸ್ ಇನ್ಸಕ್ಟರ್ ಅವರಿಗೆ ಎಫ್‌ಐಆರ್ ದಾಖಲು ಮಾಡಿ, ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎಚ್. ಕುಮಾರ್ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News