ಪ್ರಧಾನ ಮಂತ್ರಿ ಜನ್ ಸುರಕ್ಷಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಲ: ಡಾ.ಕುಮಾರ್

Update: 2022-06-24 16:31 GMT

ಮಂಗಳೂರು: ಪ್ರಧಾನಮಂತ್ರಿ ಜನ್ ಸುರಕ್ಷಾ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ದ.ಕ.ಜಿಪಂನ ಸಿಇಒ ಡಾ.ಕುಮಾರ್ ಸಂಬಂಧಿಸಿದ ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಉದ್ಯೋಗ ಖಾತ್ರಿ ಯೋಜನೆಯಡಿ ಬ್ಯಾಂಕ್‌ಗಳಲ್ಲಿ ಕೆಲವು ಅರ್ಜಿ ಬಾಕಿ ಉಳಿದಿದೆ. ಅಂತಹ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಿ ಕೂಡಲೇ ಮಂಜೂರಾತಿ ನೀಡಬೇಕು. ಸರಕಾರದಿಂದ ನೀಡುವಂತಹ ಜನಪರ ಯೋಜನೆಗಳು ಅರ್ಹರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಜಿಲ್ಲೆಯ ದಿವ್ಯಾಂಗಿಗಳು ಸ್ವಉದ್ಯೋಗ ಸೃಷ್ಟಿಸಲು ಯಾವುದೇ ರೀತಿಯ ತೊಡಕುಗಳು ಉಂಟಾಗದಂತೆ ಸಂಬಂಧಿಸಿದ ಬ್ಯಾಂಕ್‌ಗಳ ಮುಖ್ಯಸ್ಥರು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್ ಎಂ.ಪಿ. ಮಾತನಾಡಿ ೨೦೨೨-೨೩ರ ಸಾಲ ಯೋಜನೆಯಡಿ ಕೃಷಿಗೆ ೬೩೮೫.೨೬ ಕೋ.ರೂ. ಸಾಲ ವಿತರಣೆಯಾಗಿದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ ೫೦೯೩.೬೫ ಕೋ.ರೂ.ಸಾಲ ವಿತರಣೆಯಾಗಿದೆ. ಆದ್ಯತಾ ವಲಯ ಶಿಕ್ಷಣ ಕ್ಷೇತ್ರದಲ್ಲಿ ೮೮.೬೮ ಕೋ.ರೂ., ಗೃಹಸಾಲ ಕ್ಷೇತ್ರದಲ್ಲಿ ೫೮೦.೯೯ ಕೋ. ರೂ. ಹಾಗೂ ಮುದ್ರಾ ಯೋಜನೆಯಡಿ ೩೩೦೫೬ ಖಾತೆಯಲ್ಲಿ ೩೯೫.೨೨ ಕೋ.ರೂ.ಗಳಷ್ಟು ಸಾಲ-ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದೆ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ವಾಣಿಜ್ಯ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಅವುಗಳ ನಿರ್ವಹಣೆ ಮತ್ತು ಸಂಭಾವ್ಯತೆಯ ಆಧಾರದಲ್ಲಿ  ನಿಗದಿತ ಗುರಿ ಹಂಚಿಕೆ ಮಾಡಲಾಗಿದೆ ಎಂದರು.

೨೦೨೨ರ ಮಾರ್ಚ್‌ನಿಂದ ಪ್ರಧಾನ ಮಂತ್ರಿ ಜನ್‌ಧನ್ ಖಾತೆಯು ಜಿಲ್ಲೆಯಲ್ಲಿ ೪,೬೨,೭೫೫ ಲಕ್ಷ ರೂ.ಗಳು ಪ್ರಗತಿ ಸಾಧಿಸಿದೆ. ಪ್ರಧಾನ ಮಂತ್ರಿ ಜೀವನ್ ಭೀಮಾ ಯೋಜನೆಯಲ್ಲಿ ೨,೨೬,೨೪೦ ಲಕ್ಷ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ೫,೪೯,೫೪೦ ಲಕ್ಷ ಖಾತೆ ತೆರೆಯಲಾಗಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ೧,೨೨,೩೫೩ ಲಕ್ಷ ಹೊಸ ದಾಖಲಾತಿಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಮಂಗಳೂರು ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಶ್ರೀಕಾಂತ್ ವಿ.ಕೆ., ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಮುರಳಿ ಮೋಹನ್ ಪತಾಕ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News