ಮಂಗಳೂರು: ಬಿಜೆಪಿಯಿಂದ ತುರ್ತು ಪರಿಸ್ಥಿತಿಯ 45ನೆ ವರ್ಷದ ಕರಾಳ ದಿನ ಆಚರಣೆ

Update: 2022-06-25 11:05 GMT

ಮಂಗಳೂರು: ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ  ತುರ್ತು ಪರಿಸ್ಥಿತಿ ಘೋಷಣೆಯ 45ನೆ ವರ್ಷದ ನಿಮಿತ್ತ ಇಂದು ಕರಾಳ ದಿನವನ್ನಾಗಿ ಆಚರಿಸಲಾಯಿತು.  

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಎರಡನೇ ಬೃಹತ್ ಹೋರಾಟ ನಡೆದಿದ್ದರೆ ಅದು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಇಂದಿರಾಗಾಂಧಿಯವರ ಸರ್ವಾಕಾರಿ ಧೋರಣೆಯ ವಿರುದ್ಧದ ಮಹತ್ವದ ಹೋರಾಟವಾಗಿತ್ತು. ಬ್ರಿಟಿಷರ ದಬ್ಬಾಳಿಕೆಗಿಂತ ಎರಡು ಪಟ್ಟು ದಬ್ಬಾಳಿಕೆ ದೇಶವನ್ನು ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದಾಗಿದೆ ಎಂದು ಆರೋಪಿಸಿದರು.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಹಿರಿಯರನ್ನು ಎಂದೂ ಮರೆಯುವಂತಿಲ್ಲ. ಅವರ ತ್ಯಾಗ ಬಲಿದಾನ ದೊಡ್ಡದು. ಅತ್ಯಂತ ಕ್ರೂರ ರೀತಿಯ ಶಿಕ್ಷೆಯನ್ನು ಅನುಭವಿಸಿದ್ದ ಹೋರಾಟಗಾರರು ದೇಶಕ್ಕಾಗಿ ಪ್ರಾಣ ತೆರಲೂ ಸಿದ್ಧರಾಗಿದ್ದರು. ದ.ಕ. ಜಿಲ್ಲೆಯಿಂದಲೂ ಸಾವಿರಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಹಳ್ಳಿ ಹಳ್ಳಿಗಳಲ್ಲಿ ಸಂಘಟಿತವಾಗಿ ನಡೆದ ಈ ಹೋರಾಟದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದರು.

ಹೆರಾಲ್ಡ್ ಪ್ರಕರಣದಿಂದಾಗಿ ರಾಹುಲ್ ಮತ್ತು ಸೋನಿಯಾಗಾಂಧಿಯವರ ಸ್ಥಿತಿ ಅಯೋಮಯವಾಗಿದೆ. ತಾವು ತಪ್ಪಿತಸ್ಥರಲ್ಲ ಎಂದು ವಾದಿಸುವ ಅವರಿಗೆ ವಿಚಾರಣೆ ಎದುರಿಸಲು ಭಯ ಯಾಕೆ?  ಹಿಂದಿನ ಸರ್ವಾಧಿಕಾರಿ ದೋರಣೆಯಿಂದ ಈಗಿನ ಕಾಂಗ್ರೆಸ್ ಮುಖಂಡರು ಕೂಡ ಹೊರಬಂದಿಲ್ಲ ಎಂಬುದನ್ನು ಇದು ಸಾಂಕೇತಿಸುತ್ತದೆ ಎಂದವರು ಹೇಳಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತು ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹುಂಡಿ ಪ್ರಭಾ ಕಾಮತ್ ಅವರು ತುರ್ತು ಪರಿಸ್ಥಿತಿಯ ಹೋರಾಟದಲ್ಲಿ ಪಾಲ್ಗೊಂಡ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು.

ದ.ಕ.ಜಿಲ್ಲೆಯಲ್ಲೂ  ಬೃಹತ್ ಮಟ್ಟದಲ್ಲಿ ಹೋರಾಟ ಆಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭ ಹೋರಾಟ ಮಾಡಿದ ಹಲವಾರು ಮಂದಿ ಹಿರಿಯರು ಇಂದು ಮೂಲೆಗುಂಪಾಗಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕಿದೆ. ಅಲ್ಲದೆ ಅವರಿಗೆ ಸರಕಾರದಿಂದ ಪೆನ್ಷನ್‌ದೊರಕಿಸುವಲ್ಲಿಯೂ ಮನಸ್ಸು ಮಾಡಬೇಕು. ಸಂಸದರೂ ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಬೇಕು ಎಂದು ರುಕ್ಮಯ ಪೂಜಾರಿ ಮನವಿ ಮಾಡಿದರು.

ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪ್ರಭಾ ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ ಸ್ವಾಗತಿಸಿದರು. ಸತೀಶ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News