ಕಯ್ಯಾರ ಕಿಂಞಣ್ಣ ರೈ ವಿಚಾರ ಪಠ್ಯದಲ್ಲಿ ಮರು ಸೇರ್ಪಡೆಗೆ ಐಕಳ ಹರೀಶ್ ಶೆಟ್ಟಿ ಒತ್ತಾಯ

Update: 2022-06-25 11:55 GMT

ಮಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ೭ನೆ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಹಿರಿಯ ಸಾಹಿತಿ, ಕರ್ನಾಟಕ ಏಕೀಕರಣ ಹೋರಾಟ ಸಮಿತಿಗೆ ನಾಯಕತ್ವ ನೀಡಿದ್ದ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು ಕೈಬಿಟ್ಟಿರುವುದು ಸರಿಯಲ್ಲ. ತಕ್ಷಣ ಅವರ ವಿಚಾರವನ್ನು ಪಠ್ಯದಲ್ಲಿ ಮರು ಸೇರ್ಪಡೆಗೊಳಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.

ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎಂಬ ಪಠ್ಯದಲ್ಲಿ ಹಿಂದೆ ಕಯ್ಯಾರ ಕಿಂಞಣ್ಣ  ರೈಗಳು ಕರ್ನಾಟಕ ಏಕೀಕರಣಕ್ಕಾಗಿ ತನ್ನ ಕೊನೆ ಉಸಿರಿನ ತನಕ ಹೋರಾಟ ಮಾಡಿದ್ದರು ಎಂದಿತ್ತು. ಈಗ ಆ ವಾಕ್ಯವನ್ನು ತೆಗೆದು ಮಂಜೇಶ್ವರ ಗೋವಿಂದ ಪೈಗಳ ಹೆಸರನ್ನು ಸೇರಿಸಲಾಗಿದೆ. ಆದರೆ ಗೋವಿಂದ ಪೈಗಳು ೧೯೬೩ರಲ್ಲಿ ವೃದ್ಧಾಪ್ಯದಿಂದಾಗಿ ನಿಧನ ಹೊಂದಿದ್ದು, ಅವರಿಗೆ ಏಕೀಕರಣ ವಿಷಯದಲ್ಲಿ ಪರಿಣಾಮಕಾರಿ ಹೋರಾಟ ಮಾಡಲು ಅವಕಾಶ ಸಿಗಲಿಲ್ಲ. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದ್ದು, ಆ ಬಳಿಕ ಅವರು ಬದುಕಿದ್ದು ಕೇವಲ ೭ ವರ್ಷ ಮಾತ್ರ. ಆಗ ಅವರು ಅಸ್ವಸ್ಥತೆಯಿಂದಿದ್ದು, ತನ್ನ ಜತೆಗೆ ಶಿಷ್ಯ ಕಯ್ಯಾರ ಕಿಂಞಣ್ಣ ರೈಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದೇ ಕಯ್ಯಾರ ಕಿಂಞಣ್ಣ ರೈ ೨೦೧೫ರಲ್ಲಿ ನಿಧನ ಹೊಂದುವವರೆಗೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಬಲವಾಗಿ ಹೇಳುತ್ತಾ ಹೋರಾಟ ಮಾಡಿದ್ದರು. ಅಂತಹವರ ಹೆಸರನ್ನು ಪಠ್ಯದಿಂದ ಕೈಬಿಟ್ಟಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಆದ್ದರಿಂದ ಅವರ ಹೆಸರನ್ನು ಕೂಡಲೇ ಪಠ್ಯದಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.

ಕಯ್ಯಾರ ಕಿಂಞಣ್ಣ ರೈ ಬಂಟರ ಹೆಮ್ಮೆಯಾಗಿದ್ದು, ಅವರು ಇಡೀ ತುಳುನಾಡಿನ ಪ್ರತೀಕವೂ ಆಗಿದ್ದಾರೆ. ಆದ್ದರಿಂದ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಮಾಡುವ ಅವಮಾನವು ಬಂಟ ಸಮುದಾಯ ಹಾಗೂ ತುಳುನಾಡಿಗೆ ಮಾಡುವ ಅವಮಾನವಾಗಿದೆ. ಹಾಗಾಗಿ ಅವರ ಹೆಸರನ್ನು ಪಠ್ಯದಲ್ಲಿ ಸೇರಿಸಲೇಬೇಕು ಎಂದು ಐಕಳ ಹರೀಶ್ ಶೆಟ್ಟಿ  ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News