ಬೆಂಗಳೂರು: ಕಾಣೆಯಾಗಿದ್ದ ಬಾಲಕ ಒಂದು ವರ್ಷದ ಬಳಿಕ ತಾಯಿಯ ಮಡಿಲಿಗೆ

Update: 2022-06-25 13:32 GMT
ಸುಹಾಸ್ - ಪೋಷಕರ ಮಡಿಲು ಸೇರಿದ ಬಾಲಕ

ಬೆಂಗಳೂರು, ಜೂ.25: ಬರೋಬ್ಬರಿ ಒಂದು ವರ್ಷದ ಬಳಿಕ ಕಾಣೆಯಾಗಿದ್ದ ಬಾಲಕನೋರ್ವ ಮರಳಿ ತಾಯಿಯ ಮಡಿಲು ಸೇರಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಎರಡು ವಾರಗಳ ಹಿಂದೆ ನಗರದ ಬಿಟಿಎಂ ಲೇಔಟ್ ಬಳಿ ಹಸಿವಿನಿಂದ ಓಡಾಡುತ್ತಿದ್ದ ಉತ್ತರ ಭಾರತ ಮೂಲದ ಸುಹಾಸ್ ಎಂಬ ಬಾಲಕನನ್ನು ಸ್ಥಳೀಯ ಬೇಕರಿ ಮಾಲಕ ರಾಜಣ್ಣ, ಯುವಕರಾದ ನಿತಿನ್ ಮತ್ತು ಶ್ರೀಧರ್ ಗಮನಿಸಿ ವಿಚಾರಿಸಿದ್ದಾರೆ.

ಹಿಂದಿ ಭಾಷೆ ಮಾತನಾಡುತ್ತಿದ್ದ ಬಾಲಕನಿಗೆ ಊರಿನ ಹೆಸರು ಮರೆತಿತ್ತು ಮತ್ತು ತಿಳುವಳಿಕೆ ಇಲ್ಲದ ಕಾರಣ ತನ್ನ ಪೋಷಕರ ಮಾಹಿತಿ ಕೊಡಲು ಆಗಿರಲಿಲ್ಲ. ಆದರೆ, ಬಾಲಕ ಸುಹಾಸ್ ಹೇಳಿದ್ದ ಅಣ್ಣನ ಹೆಸರನ್ನು ಫೇಸ್ ಬುಕ್‍ನಲ್ಲಿ ಹುಡುಕಾಡಿದಾಗ ಪಶ್ಚಿಮ ಬಂಗಾಳದಲ್ಲಿರುವ ತನ್ನ ಅಣ್ಣನ ಫೋಟೋವನ್ನ ಗುರುತಿಸಿದ್ದ.

ತದನಂತರ, ಕೂಡಲೇ ಮೆಸೆಂಜರ್ ಮೂಲಕ ಆತನ ಅಣ್ಣನನ್ನ ಸಂಪರ್ಕಿಸಿದ್ದಾರೆ. ನಿತಿನ್ ಹಾಗೂ ಶ್ರೀಧರ್ ಆತನ ಪೋಷಕರು ಬರುವವರೆಗೂ ಬೇಕರಿಯಲ್ಲೇ ಮಲಗಲು ಜಾಗ ಕೊಟ್ಟು, ಹೇರ್ ಕಟಿಂಗ್ ಮಾಡಿಸಿ, ಊಟ ಬಟ್ಟೆ ಕೊಟ್ಟು ನೋಡಿಕೊಂಡಿದ್ದಾರೆ. 

ಒಂದು ವಾರದ ಬಳಿಕ ಸುಹಾಸ್ ಪೋಷಕರು ಬೆಂಗಳೂರಿಗೆ ಬಂದಿದ್ದು ಮಗನನ್ನು ಕಂಡು ಭಾವುಕರಾದರು. ಒಂದು ವರ್ಷದ ಹಿಂದೆ ಊರಿನ ಬಳಿ ಆಟವಾಡುವಾಗ ಗೂಡ್ಸ್ ರೈಲು ಹತ್ತಿದ್ದ ಬಾಲಕ ದಿಕ್ಕು ತೋಚದೇ ಊರೂರು ಅಲೆದು ಕೊನೆಗೆ ನಗರಕ್ಕೆ ಬಂದು ಸೇರಿದ್ದ ಎಂದು ಬಾಲಕನ ತಾಯಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News