ಬಟ್ಟಂಪಾಡಿಯಲ್ಲಿ ಮುಳುಗಿದ ಹಡಗು; ಗುಜರಾತ್‌ನಿಂದ ವಿಶೇಷ ತಂತ್ರಜ್ಞ ಹಡಗು ಆಗಮನ

Update: 2022-06-25 14:36 GMT

ಮಂಗಳೂರು : ಉಳ್ಳಾಲ ಬಟ್ಟಂಪಾಡಿ ಸಮುದ್ರ ತೀರದಿಂದ 5.2 ನಾಟಿಕಲ್ ದೂರದಲ್ಲಿ ಭಾಗಶಃ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಸರಕು ಹಡಗಿನಿಂದ ತೈಲ ಸೋರಿಕೆ ಭೀತಿಯ ಹಿನ್ನೆಲೆಯಲ್ಲಿ ‘ಸಮುದ್ರ ಪಾವಕ್’ ಎಂಬ ವಿಶೇಷ ತಂತ್ರಜ್ಞ ಹಡಗು ಶನಿವಾರ ಗುಜರಾತ್‌ನಿಂದ ಮಂಗಳೂರಿಗೆ ಆಗಮಿಸಿದೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನ ಪೋರ್‌ಬಂದರ್‌ನಿಂದ ಈ ಹಡಗನ್ನು ಕರೆಸಲಾಗಿದೆ. ಸುಸಜ್ಜಿತ ಮಾಲಿನ್ಯ ನಿಯಂತ್ರಣ ಹಡಗು ಇದಾಗಿದ್ದು, ಇದನ್ನು ಬಳಸಿಕೊಂಡು ಹೆಲಿಕಾಪ್ಟರ್ ಅಥವಾ ಇತರ ಹಡಗುಗಳ ನೆರವಿನಿಂದ ತೈಲ ಹೊರತೆಗೆಯಲು ಪ್ರಯತ್ನ ನಡೆಸಲಿದೆ ಎಂದು ತಿಳಿದು ಬಂದಿದೆ.

ಸಮುದ್ರ ಪಾವಕ್ ಹಡಗು ಶನಿವಾರ ಮುಳುಗಿದ ಪ್ರಿನ್ಸೆಸ್ ಮಿರಾಲ್ ಹಡಗಿನ ಸಮೀಪ ಲಂಗರು ಹಾಕಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದೆ. ಸದ್ಯ ಪ್ರಿನ್ಸೆಸ್ ಮಿರಾಲ್ ಹಡಗು ಭಾಗಶಃ ಮುಳುಗಿದೆ. ಹಾಗಾಗಿ ಅದರಲ್ಲಿರುವ ೧೫೦ ಮೆಟ್ರಿಕ್ ಟನ್ ತೈಲ ಹೊರಚೆಲ್ಲುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಹಡಗು ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯ ಭೀತಿ ಇದೆ. ಆದ್ದರಿಂದ ತೈಲ ಹೊರಗೆ ತೆಗೆಯುವ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಲಾಗುತ್ತಿದೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಶನಿವಾರ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪೊಲೀಸ್, ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮೀನುಗಾರ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ಭಾಗಶಃ ಮುಳುಗಿರುವ ಹಡಗಿನ ಮೇಲೆ ಕೋಸ್ಟ್‌ಗಾರ್ಡ್ ನೌಕೆ, 9 ಹಡಗು, 3 ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್‌ಗಳು ಕಣ್ಗಾವಲು ಇರಿಸಿವೆ. ತೈಲ ಸೋರಿಕೆ ಕಂಡುಬಂದರೆ ವಿಶೇಷ ನೌಕೆಯ ತಂತ್ರಜ್ಞರು ಕೂಡ ಸೋರಿಕೆ ತಡೆ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರುವುದಾಗಿ ಡಿಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News