ಮಂಗಳೂರು : ಹೊಟೇಲ್ ಉದ್ಯಮಿ ಅಹ್ಮದ್ ಮಾಹಿನ್ ಬಾವಾ ನಿಧನ

Update: 2022-06-25 17:41 GMT

ಮಂಗಳೂರು : ನಗರದ ರಾಯಲ್ ದರ್ಬಾರ್ ಹೊಟೇಲ್ ಮಾಲಕ, ಉದ್ಯಮಿ, ಬಲ್ಮಠ ನಿವಾಸಿ ಅಹ್ಮದ್ ಮಾಹಿನ್ ಬಾವಾ (84) ಶನಿವಾರ ತನ್ನ ಸೃಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೂಲತಃ ಬಂದರ್ ಕಂದಕ್‌ನ ಪ್ರಸ್ತುತ ಜ್ಯೋತಿ-ಬಲ್ಮಠದ ನಿವಾಸಿಯಾಗಿದ್ದ ಅಹ್ಮದ್ ಮಾಹಿನ್ ಬಾವಾ ಹದಿಹರೆಯದಲ್ಲೇ ಉದ್ಯೋಗ ಅರಸಿಕೊಂಡು ಮುಂಬೈಗೆ ತೆರಳಿದ್ದರು. ಅಲ್ಲಿ ವೀಸಾ ಏಜೆನ್ಸಿ ತೆರೆದ ಅಹ್ಮದ್ ಮಾಹಿನ್ ಬಾವಾ ಮಂಗಳೂರು ಮತ್ತು ಸುತ್ತಮುತ್ತಲಿನ ಸಾವಿರಾರು ಯುವಕರಿಗೆ ಗಲ್ಫ್ ರಾಷ್ಟ್ರಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸಿದ್ದರು. ಹಲವು ವರ್ಷಗಳ ಬಳಿಕ ಊರಿಗೆ ಮರಳಿ ಹೊಟೇಲ್ ಉದ್ಯಮ ಆರಂಭಿಸಿದರು.

ನಗರದಲ್ಲಿ ‘ರಾಯಲ್ ದರ್ಬಾರ್’ ಹೊಟೇಲ್ ತೆರೆಯುವ ಮೂಲಕ ಮನೆ ಮಾತಾದರು. ಪರೋಪಕಾರಿಯಾಗಿದ್ದ ಅಹ್ಮದ್ ಮಾಹಿನ್ ಬಾವಾ ಹಲವರಿಗೆ ಉದ್ಯೋಗ ಕಲ್ಪಿಸಿದ್ದರಲ್ಲದೆ ಶಿಕ್ಷಣ, ಮದುವೆ ಇತ್ಯಾದಿಗೆ ನೆರವು ನೀಡುತ್ತಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆಯು ಶನಿವಾರ ಸಂಜೆ ಬಂದರ್‌ನ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ನೆರವೇರಿಸಲಾಯಿತು.

ಸಂತಾಪ: ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಬ್ಯಾರೀಸ್ ಕೆನರಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಅವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News