ಮೋದಿ ನೇತೃತ್ವದ ಬಿಜೆಪಿ ಸರಕಾರದ 8 ವರ್ಷಗಳ ಆಡಳಿತ ಜನರ ಪಾಲಿಗದು ಹಿತಕಾರಿಯೇ? ಅಹಿತಕಾರಿಯೇ?

Update: 2022-06-26 06:06 GMT

ಭಾಗ-2

  ಮುಂದೆ 2014ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2ಜಿ ಪ್ರಕರಣ ತಣ್ಣಗಾಯಿತು. ಈ ಹಗರಣದ ವಿಚಾರಣೆಗಾಗಿ 2012ರಲ್ಲಿ ಸ್ಥಾಪಿತ ವಿಶೇಷ ನ್ಯಾಯಾಲಯ ಸುದೀರ್ಘ ವಿಚಾರಣೆ ಬಳಿಕ ಆರೋಪಿಗಳನ್ನು ಖುಲಾಸೆಗೊಳಿಸಿ 2017ರಲ್ಲಿ ತನ್ನ ಆದೇಶ ನೀಡಿತ್ತು. ವಿಶೇಷ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ತನ್ನ ಆದೇಶದಲ್ಲಿ ಉಲ್ಲೇಖಿಸಿದ ಕೆಲವು ವಾಕ್ಯಗಳು ಸ್ವಾರಸ್ಯಕರ ಮತ್ತು ಅರ್ಥಗರ್ಭಿತವಾಗಿತ್ತು- ‘‘ಕಳೆದ ಐದು ವರ್ಷಗಳ ವಿಚಾರಣೆ ಸಂದರ್ಭ ಈ ದೊಡ್ಡ ಪ್ರಕರಣ ಕುರಿತಂತೆ ಆರೋಪಗಳನ್ನು ಸಾಬೀತು ಮಾಡಲು ಸಂಬಂಧಿಸಿ ತನಿಖಾ ಏಜೆನ್ಸಿ ಸಿಬಿಐ ಈ.ಡಿ. ಅಥವಾ ಆರೋಪ ಹೊರಿಸಿದ ಯಾರಾದರೂ ಅಗತ್ಯದ ಪುರಾವೆ, ದಾಖಲೆಗಳನ್ನು ತರುವರೆಂದು ನಾನು ಕಾಯುತ್ತಲೇ ಇದ್ದೆ. ಆದರೆ ಬೃಹತ್ ಭ್ರಷ್ಟ ಪ್ರಕರಣ ಎಂದು ಕರೆಯಲ್ಪಟ್ಟ ಈ ಪ್ರಕರಣದ ಆರೋಪಗಳನ್ನು ಸಾಬೀತು ಗೊಳಿಸುವ ಯಾವುದೇ ಪುರಾವೆಗಳು, ಸಾಕ್ಷಿಗಳನ್ನು ಯಾರೂ ಒದಗಿಸದ ಕಾರಣ ಈ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುತಿದ್ದೇನೆ’’ ಎಂದು ಉಲ್ಲೇಖಿಸುತ್ತಾರೆ. ವಿಶೇಷ ನ್ಯಾಯಾಲಯದ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮೋದಿ ಸರಕಾರ ಮತ್ತು ಬಿಜೆಪಿ ಆ ತೀರ್ಪಿನ ವಿರುದ್ಧ ಹೈಕೋರ್ಟ್ ಯಾ ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಕೂಡಾ ಸಲ್ಲಿಸಲಿಲ್ಲ. ಅಂದರೆ ಅವರಿಗೆ ಸದರಿ ಪ್ರಕರಣದಲ್ಲಿನ ಆರೋಪಗಳನ್ನು ಸಾಬೀತುಗೊಳಿಸುವ ಪುರಾವೆ ಏನೂ ಇರಲಿಲ್ಲ ಎಂದಾಯಿತು. ಆದರೆ ರಾಜಕೀಯವಾಗಿ ವಿರೋಧಿಗಳ ವ್ಯಕ್ತಿತ್ವವನ್ನು ಮಸುಕು ಗೊಳಿಸಲು ಏನು ಬೇಕಿತ್ತು ಅದು ಆಗಿಹೋಗಿದೆ ಎಂದು ಆ ಪಕ್ಷದ ಎಲ್ಲಾ ಗಣ್ಯ ನಾಯಕರು ತಿಳಿದುಕೊಂಡಂತಿದೆ.

 ಈ ಪ್ರಕರಣ ಕುರಿತಂತೆ ಸಿಎಜಿ ವಿನೋದ್ ರಾಯ್ ಮತ್ತು ಬಿಜೆಪಿ ಬಹುಶಃ ಉದ್ದೇಶಪೂರ್ವಕವಾಗಿ ಗಮನಿಸದೆ ಇರುವ ಒಂದೆರಡು ವಿಷಯಗಳಿವೆ. ಮೊದಲನೆಯದಾಗಿ, ‘‘ಆ ಮೊದಲು ಬಂದವರಿಗೆ ಮೊದಲ ಆದ್ಯತೆ’’ ವಿಧಾನವನ್ನು ಜಾರಿಗೆ ತಂದವರು ಡಿ. ರಾಜ ಅಥವಾ ಯುಪಿಎ ಸರಕಾರ ಅಲ್ಲ, ಸಾರ್ವಜನಿಕರ/ಗ್ರಾಹಕರ ಹಿತಾಸಕ್ತಿಗಾಗಿ ಎಂದು ಆ ವಿಧಾನವನ್ನು ಜಾರಿಗೊಳಿಸಿದವರು ವಾಜಪೇಯಿ ಸರಕಾರದಲ್ಲಿ ಟೆಲಿಕಾಂ ಸಚಿವರಾಗಿದ್ದ ಪ್ರಮೋದ್ ಮಹಾಜನ್ ಅವರು. ಆದರೆ ಅಚ್ಚರಿ ಏನೆಂದರೆ ಬಿಜೆಪಿಯವರಿಗೆ ಅಂದು ತೀರ್ಮಾನ ಮಾಡಿರುವ ಮಹಾಜನ್ ವಿರುದ್ಧ ಯಾವುದೇ ಹಗರಣ ಕಂಡುಬಂದಿಲ್ಲ, ಅಂತಹ ಆರೋಪ ಮಾಡಲು ಮುಂದೆ ಯುಪಿಎ ಸರಕಾರ ಬಂದು ಡಿ. ರಾಜ ಸಚಿವರಾಗುವವರೆಗೆ ಕಾಯ ಬೇಕಾಯಿತು! ಎರಡನೆಯದಾಗಿ ಆ ನಿರ್ಧಾರದಿಂದ ವ್ಯಾವಹಾರಿಕವಾಗಿ ನಷ್ಟ ಇಲ್ಲವೇ ಅನನುಕೂಲ ಅನುಭವಿಸಿದ ಯಾವುದೇ ವ್ಯಕ್ತಿ ಯಾವುದೇ ಆರೋಪ ಮಾಡಿಲ್ಲ. ಸಿಎಜಿ ವಿನೋದ್ ರಾಯ್ ಈ ಆದಾಯ ನಷ್ಟದ ವರದಿ ನೀಡಿದರೆ, ಬಿಜೆಪಿ ಆ ‘ನಷ್ಟವನ್ನು’ ತಮ್ಮ ‘ಲಾಭ’ವನ್ನಾಗಿ ಮಾರ್ಪಡಿಸಿದ್ದಾರೆ ಅಷ್ಟೇ! ಮೂರನೆಯದಾಗಿ ಆದಾಯ ನಷ್ಟದ ವರದಿ ಒಪ್ಪಿಸಿ ಆಗಾಗ ಆಸಕ್ತ ಪತ್ರಕರ್ತರಿಗೆ ಪೂರಕ ಮಾಹಿತಿಗಳನ್ನು ಒದಗಿಸಿದ ವಿನೋದ್ ರಾಯ್ ಅವರಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸೇವೆಯಿಂದ ನಿವೃತ್ತಿ ಬಳಿಕ ಎರಡೆರಡು ಲಾಭದಾಯಕ ಹುದ್ದೆ ನೀಡಿರುವುದು ಕೇವಲ ಕಾಕತಾಳೀಯವೇ? ಅಲ್ಲ ಅವರ ಉಪಕಾರ ಸ್ಮರಣೆಯೇ?

 ನಾಲ್ಕನೆಯದಾಗಿ ಆ ತರಂಗಾಂತರ ವಿತರಣಾ ವಿಧಾನ ಗ್ರಾಹಕರಿಗೆ ಹಿತಕಾರಿ ಆಗಿತ್ತು. ವಿನೋದ್ ರಾಯ್ ಮತ್ತು ಬಿಜೆಪಿಯವರು ಅದರಂತೆ ಒಂದು ವೇಳೆ ಯುಪಿಎ ಸರಕಾರ ಟೆಂಡರ್ ಮೂಲಕ ಗರಿಷ್ಠ ಬಿಡ್ಡರ್‌ಗಳಿಗೆ ತರಂಗಾಂತರ ವಿತರಣೆ ಆಗುತ್ತಿದ್ದರೆ ಎಲ್ಲಾ ಟೆಲಿಕಾಂ ಕಂಪೆನಿಗಳು ಅವರು ಬಿಡ್ ಮಾಡಿ ಪಾವತಿ ಮಾಡಿರಬಹುದಾದ ಸಂಭಾವ್ಯ ಬೆಲೆ ತರಂಗಾಂತರ ಖರೀದಿ ರೂ. 1.50 ರಿಂದ 2.00 ಲಕ್ಷ ಕೋಟಿ ಪಾವತಿ ಮಾಡಿದ್ದರೆ, ಆ ಕಂಪೆನಿಗಳು ತಾವು ತೆತ್ತ ಲಕ್ಷ ಕೋಟಿ ರೂ.ಯನ್ನು ಗ್ರಾಹಕರಿಂದಲೇ ಹೆಚ್ಚಿನ ಸೇವಾಶುಲ್ಕ ಮೂಲಕ ವಸೂಲು ಮಾಡುತ್ತಿದ್ದರು. ಅಂದರೆ ಅದುವರೆಗೆ ಗ್ರಾಹಕರಿಗೆ ಆ ಕಂಪೆನಿಗಳು ಒಂದು ನಿಮಿಷ ಕಾಲ್ ಗೆ 50 ಪೈಸೆ ಚಾರ್ಜ್ ಮಾಡುತ್ತಿದ್ದರೆ, ಇದೀಗ ಹೆಚ್ಚುವರಿಯಾಗಿ ಕೊಟ್ಟ ಲಕ್ಷ ಕೋಟಿ ರೂ. ವಸೂಲಿಗಾಗಿ ತಮ್ಮ ಕಾಲ್‌ರೇಟ್ ಜಾಸ್ತಿ ಮಾಡಿ ಅಂದರೆ ಒಂದು ನಿಮಿಷಕ್ಕೆ ಕನಿಷ್ಠ ರೂ 1.50ರಿಂದ 2.00 ರೇಟು ವಸೂಲಿ ಮಾಡುವ ಸಾಧ್ಯತೆ ಇತ್ತು. ಆದುದರಿಂದ ಆ ಬಿಡ್ಡಿಂಗ್ ವಿಧಾನ ಗ್ರಾಹಕಸ್ನೇಹಿಯಾಗಿರಲು ಸಾಧ್ಯವಿಲ್ಲ.

7(ಬಿ). 2ಜಿ ತರಂಗಾಂತರ ಮಾರಾಟದಲ್ಲಿ ಸಂಭಾವ್ಯ ಆದಾಯದ ನಷ್ಟ ಒಂದು ಹಗರಣ ಎಂದಾದರೆ, ದಿಢೀರ್ ಘೋಷಣೆ ಮೂಲಕ ಜಾರಿಯಾದ ನೋಟ್‌ಬ್ಯಾನ್‌ನಿಂದ ದೇಶದ ಅರ್ಧ ಕ್ಷೇತ್ರ ತೀವ್ರ ಕುಸಿತ ಕಂಡು ಒಟ್ಟು ದೇಶದ ಜಿಡಿಪಿ ನಷ್ಟ -0.23 ಶೇ. ರೂ. 5 ಲಕ್ಷ ಕೋಟಿ ಮೀರಿದ್ದರೆ ಅದು ಒಂದು ಬೃಹತ್ ಹಗರಣ ಅಲ್ಲವೇ?

    ತರಂಗಾಂತರ ಮಾರಾಟದಲ್ಲಿ ಅದು ಕೇವಲ ಊಹಾತ್ಮಕ ನಷ್ಟದ ಅಂದಾಜು ರೂ 1.60 ಲಕ್ಷ-ಕೋಟಿ, ನೋಟ್‌ಬ್ಯಾನ್ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಅಂಕಿ-ಸಂಖ್ಯೆಗಳ ಮೂಲಕ ಲೆಕ್ಕ ಹಾಕಿದ ದೇಶದ ಒಟ್ಟು ಉತ್ಪನ್ನ ಜಿಡಿಪಿ ನಷ್ಟ- ಶೇ. 0.23 ಅಂದರೆ ರೂ. 5 ಲಕ್ಷ ಕೋಟಿಗೂ ಮೀರಿ! ತರಂಗಾಂತರ ಮಾರಾಟದಲ್ಲಿ ಅದು ಅಂದಾಜಿತ ಆದಾಯದ ನಷ್ಟ. ಜಿಡಿಪಿ ನಷ್ಟ, ಅಂದಾಜು ನಷ್ಟ ಅಲ್ಲ, ಅದು ರಿಸರ್ವ್ ಬ್ಯಾಂಕ್ ತಜ್ಞರು ಅಧಿಕೃತ ಲೆಕ್ಕಹಾಕಿ ತೋರಿಸಿದ ನಷ್ಟದ ಪ್ರಮಾಣ. ಅಂದರೆ ತರಂಗಾಂತರ ಮಾರಾಟದಲ್ಲಿ ಅಂದಾಜಿತ ನಷ್ಟದ ಬಗ್ಗೆ ಸಂಬಂಧಪಟ್ಟ ಸಚಿವರ ವಿರುದ್ಧ ಕೇಸು ಹಾಕಿ ಜೈಲಿಗೆ ಕಳುಹಿಸಬಹುದಾದರೆ, ನೋಟ್‌ಬ್ಯಾನ್ ಪ್ರಕರಣದಲ್ಲಿ ಯಾವುದೇ ಅನುಭವಿ ಅರ್ಥಶಾಸ್ತ್ರಜ್ಞರ ಸಲಹೆ, ಪರಾಮರ್ಶೆ ಇಲ್ಲದೆ, ಸಕ್ಷಮ ಪ್ರಾಧಿಕಾರ ರಿಸರ್ವ್ ಬ್ಯಾಂಕ್‌ನ ಅಧಿಕೃತ ಮಾನ್ಯತೆ ಇಲ್ಲದೆ ದೇಶದ ಪ್ರಧಾನಿಯ ಏಕ ವ್ಯಕ್ತಿ ತೀರ್ಮಾನದಂತೆ ದಿಢೀರ್ ಘೋಷಣೆಯಿಂದ ದೇಶದ ಸಮಗ್ರ ಆರ್ಥಿಕ ಕ್ಷೇತ್ರ, ಅನುಭವಿಸಿದ ನಷ್ಟ ಅಗಾಧ. ಸುಮಾರು 3 ವರ್ಷ ಕಾಲ ದೇಶದ ಜನ ಸಾಮಾನ್ಯರು, ವಿಶೇಷವಾಗಿ ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಉದ್ಯಮಿಗಳು ಮತ್ತು ಅದರ ಉದ್ಯೋಗಿಗಳು ಅನುಭವಿಸಿದ ಕಷ್ಟ ನಷ್ಟ ಅಷ್ಟೇ ಅವರ್ಣನೀಯ, ಇಂತಹ ಘನಘೋರ ಆರ್ಥಿಕ ಅಪರಾಧ ಮಾಡಿರುವ ಮೋದಿ ಮತ್ತು ಅವರ ಸರಕಾರದ ವಿರುದ್ಧ ಏಕೆ ಕೇಸು ದಾಖಲಿಸಬಾರದು?

8. ತರಾತುರಿಯಲ್ಲಿ ಜಾರಿಗೊಳಿಸಲಾದ ಜಿಎಸ್‌ಟಿ ಕಷ್ಟ ನಷ್ಟ ಅನುಭವಿಸಿ ಅತಂತ್ರಗೊಂಡ ವ್ಯವಹಾರ ಕ್ಷೇತ್ರ:

      ಆರ್ಥಿಕ ಕ್ಷೇತ್ರದ ನುರಿತ ಅನುಭವಿ ತಜ್ಞರ ಸಲಹೆ, ವಿಚಾರವಿನಿಮಯ ಮತ್ತು ಸಮರ್ಪಕ ಪೂರ್ವಸಿದ್ಧತೆ ಇಲ್ಲದೆ ಮೋದಿ ಸರಕಾರ ತರಾತುರಿಯಿಂದ ಜಾರಿಗೊಳಿಸಿದ ಜಿಎಸ್‌ಟಿಯಿಂದ ದೇಶದ ವ್ಯವಹಾರ ಕ್ಷೇತ್ರ ಅನೇಕ ತೆರನಾದ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ಹಿಂದೆ (2012 - 13ರಲ್ಲಿ) ಅಂದಿನ ಯುಪಿಎ ಸರಕಾರ ಎಲ್ಲಾ ಪೂರ್ವಸಿದ್ಧತೆಯೊಂದಿಗೆ ಜಿಎಸ್‌ಟಿ ಮಸೂದೆಯನ್ನು ಮಂಡಿಸಿದಾಗ ಅಂದಿನ ವಿರೋಧ ಪಕ್ಷ- ಬಿಜೆಪಿ ಪಾರ್ಲಿಮೆಂಟ್ ಅಧಿವೇಶನದ ಉದ್ದಕ್ಕೂ ಅಡ್ಡಿಪಡಿಸುತ್ತಾ ಆ ಮಸೂದೆ ಜಾರಿಯಾಗದಂತೆ ನೋಡಿಕೊಂಡರು. ಅಂದು ಯುಪಿಎ ಸರಕಾರ ಸಿದ್ಧಪಡಿಸಿದ್ದ ಆ ಮಸೂದೆ ಪ್ರಕಾರ ಜಿಎಸ್‌ಟಿ ದರ ಗ್ರಾಹಕ ಹಿತೈಷಿ ಯಾಗಿದ್ದು ವ್ಯವಹಾರಸ್ಥರಿಗೂ ಅನುಕೂಲವಾಗಿತ್ತೆಂದು ತಿಳಿದುಬಂದಿತ್ತು. ಅಷ್ಟರಲ್ಲೇ ನೋಟು ಬಂದಿ ಕಾರ್ಯದಿಂದ ದಿಕ್ಕೆಟ್ಟಿದ ವ್ಯವಹಾರ ಕ್ಷೇತ್ರ ತರಾತುರಿಯಿಂದ ಜಾರಿಯಾದ ಈ ಜಿಎಸ್‌ಟಿ ಮಸೂದೆಯಿಂದ ಇನ್ನಷ್ಟು ಸಮಸ್ಯೆ, ಕಷ್ಟನಷ್ಟಗಳನ್ನು ಅನುಭವಿಸಿದಂತಾಯಿತು. ವ್ಯವಹಾರ ಕ್ಷೇತ್ರ ಹೊಸ ರೂಪದ ತೆರಿಗೆ ವ್ಯವಸ್ಥೆಯಿಂದ ತಲ್ಲಣಗೊಂಡರೆ, ಜನಸಾಮಾನ್ಯರು ಬಳಸುವ ಬಹುತೇಕ ಎಲ್ಲ ನಿತ್ಯಉಪಯೋಗಿಸುವ ವಸ್ತುಗಳ ಮೇಲೂ ಹೇರಲಾದ ತೆರಿಗೆಯಿಂದ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುವಂತಾಯಿತು.

Writer - ಎಸ್. ವಿ. ಅಮಿನ್

contributor

Editor - ಎಸ್. ವಿ. ಅಮಿನ್

contributor

Similar News