ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ 'ಸಂಘಟನಾ ವಿಚಾರ ಕಾರ್ಯಾಗಾರ'

Update: 2022-06-27 11:23 GMT

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ. ದ. ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಂಘಟನೆಯ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪದಾಧಿಕಾರಿಗಳ 'ಸಂಘಟನಾ ವಿಚಾರ ಕಾರ್ಯಾಗಾರ'ವನ್ನು ಬಜ್ಪೆ ಸಿದ್ಧಾರ್ಥ ನಗರದ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಂಗಣದಲ್ಲಿ ರವಿವಾರ  ನಡೆಸಲಾಯಿತು.

ದ.ಸಂ.ಸ. ಹಿರಿಯ ಮುಖಂಡರೂ ಮಂಗಳೂರು ತಾಲೂಕು ಸಂಘಟನಾ  ಸಂಚಾಲಕರೂ ಆಗಿರುವ ರುಕ್ಕಯ್ಯ ಕರಂಬಾರು ಇವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು ಪ್ರಾಸ್ತಾವಿಕವಾಗಿ ಕಾರ್ಯಾಗಾರದ ಉದ್ದೇಶವನ್ನು ತಿಳಿಸಿದರು. ಕಾರ್ಯಗಾರದಲ್ಲಿ ವಿಷಯ ಮಂಡಿಸಿದ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್ 1980ರ ದಶಕದಲ್ಲಿ ಭದ್ರಾವತಿಯ ಪ್ರೊ. ಬಿ. ಕೃಷ್ಣಪ್ಪರವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕುವ ಮೂಲಕ ಕರ್ನಾಟಕದ ಅಸಂಘಟಿತ ಶೋಷಿತ ದಲಿತ ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ ಹೋರಾಟದ ಬೀಜವನ್ನು ಬಿತ್ತಿದರು. ನಂತರದ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯು ಹಲವಾರು ಭೂ ಹೋರಾಟ, ಮಲಹೊರುವ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ, ಸಾಮಾಜಿಕ ಶೋಷಣೆ, ಮೇಲ್ವರ್ಗಗಳ ದಬ್ಬಾಳಿಕೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವ ಮೂಲಕ ದಲಿತ ಸಮುದಾಯಗಳಲ್ಲಿ ಸ್ವಾಭಿಮಾನ ಹಾಗೂ ಪ್ರಶ್ನಿಸುವ ಮನೋಭಾವವನ್ನು ಮೂಡಿಸಿತು. ಸಂಘಟನೆಯ ಪದಾಧಿಕಾರಿಗಳು ತಮ್ಮ ನೈಜ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತು ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ರವರ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.

ದ.ಸಂ.ಸ.ಹಿರಿಯ ಮುಖಂಡರಾದ ಶ್ರೀಯುತ ನಾರಾಯಣ ಮಣೂರು ಮಾತನಾಡಿ "ಅಂಬೇಡ್ಕರ್ ರವರ ಪ್ರಕಾರ ಬೌದ್ಧ ಧಮ್ಮ ಹಾಗೂ ಬ್ರಾಹ್ಮಣ ಧರ್ಮದ ನಡುವಿನ ಸಂಘರ್ಷವೇ ಭಾರತದ ಇತಿಹಾಸ. ಭಗವಾನ್ ಬುದ್ಧರ ಕಾಲದಿಂದ ಇವತ್ತಿನವರೆಗೂ ಶೇ 3ರಷ್ಟಿರುವ ಮನುವಾದಿಗಳೇ ಎಲ್ಲಾ ಸ್ತರದ ಮುಖ್ಯ ಅಧಿಕಾರ ಸ್ಥಾನವನ್ನು ಅಲಂಕರಿಸಿ ಶೇ 97ರಷ್ಟಿರುವ ಬಹುಜನ ಸಮಾಜವನ್ನು ನಿಯಂತ್ರಿಸುತ್ತಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ರವರು ಹೇಳಿದಂತೆ ನಾವು ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿ ಹಿಡಿತದಿಂದ ಹೊರಬಂದು ಸ್ವಾಭಿಮಾನ ಹಾಗೂ ಆತ್ಮಗೌರವದ ಬದುಕು ಕಟ್ಟಿಕೊಳ್ಳಲು ಸಂಘಟನೆಯ ಜವಾಬ್ದಾರಿ ಅತ್ಯಂತ ಮಹತ್ತರವಾದುದು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ದ. ಸಂ. ಸ. ಹಿರಿಯ ಮುಖಂಡರಾದ ಮಂಜಪ್ಪ ಪುತ್ರನ್ ಹಾಗೂ ಭಾಸ್ಕರ್. ಎಂ. ಇವರು ಸಂಘಟನಾ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಕುರಿತು ಮಾಹಿತಿ ತಿಳಿಸಿದರು. ವೇದಿಕೆಯಲ್ಲಿ ದ.ಸಂ. ಸ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಿದ್ಧಾರ್ಥ ನಗರ ಗ್ರಾಮ ಸಂಚಾಲಕರಾದ ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ.ಡಿ. ಕಾರ್ಯಗಾರ ನಿರ್ವಹಿಸಿ, ಬಾಲು ಕುಂದರ್ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News