ಬೆಂಗಳೂರು ನಗರದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿಸಲು ದೃಢ ಹೆಜ್ಜೆಗಳನ್ನಿಡಬೇಕು: ಎಸ್.ಎಂ ಕೃಷ್ಣ

Update: 2022-06-27 11:42 GMT

ಬೆಂಗಳೂರು, ಜೂ. 27: ‘ಜಗತ್ತಿನ ಗಮನ ಸೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾಗಿರುವ ಬೆಂಗಳೂರು ನಗರವನ್ನು ಇನ್ನಷ್ಟು ಪ್ರತಿಷ್ಠೆಯ ನಗರವನ್ನಾಗಿ ಬೆಳೆಸಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ದೃಢ ಹೆಜ್ಜೆಯನ್ನಿಡಬೇಕು' ಎಂದು ಅಂತರ್‍ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ಪುರಸ್ಕøತ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಸಲಹೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ‘ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಅವರು, ‘1998ರಲ್ಲಿ ರಾಷ್ಟ್ರದ ಸಿಲಿಕಾನ್ ಕೇಂದ್ರ ಯಾವ ನಗರ ಆಗಬೇಕೆಂಬ ವಿಚಾರದಲ್ಲಿ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬೆಂಗಳೂರು ನಗರ ಆ ಯಶಸ್ಸು ಪಡೆಯಿತು. ಇದೀಗ ಅದನ್ನು ಉಳಿಸಿಕೊಳ್ಳುವುದರ ಜೊತೆಗೆ ಮುಂದುವರಿಸಿಕೊಂಡು ಹೋಗಬೇಕು' ಎಂದು ಅಪೇಕ್ಷೆ ವ್ಯಕ್ತಪಡಿಸಿದರು.

‘ಬೆಂಗಳೂರು ನಗರದ ಜೊತೆಗೆ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ಸೇರಿದಂತೆ 2ನೆ ಹಂತದ ನಗರಗಳೂ ಅಭಿವೃದ್ಧಿ ಹೊಂದಬೇಕು. ಅಭಿವೃದ್ಧಿಯನ್ನು ವಿಸ್ತರಿಸುವ ಕೆಲಸ ಆಗಬೇಕು' ಎಂದು ಸಲಹೆ ಮಾಡಿದ ಅವರು, ‘ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಆಶಯಕ್ಕೆ ಪೂರಕವಾಗಿ ಈಗ ವಿಸ್ತಾರವಾಗಿ ಬೆಳೆದಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ವಿಪ್ರೊ ಮುಖ್ಯಸ್ಥ ಅಝೀಂ ಪ್ರೇಂಜಿ ಸೇರಿದಂತೆ ಹಲವರು ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಭಾರತವನ್ನು ಬೆಂಗಳೂರಿನ ಮೂಲಕ ನೋಡಬೇಕು' ಎಂಬ ಮನಮೋಹನ್ ಸಿಂಗ್ ಮಾತು ಸತ್ಯ ಎಂದು ಸ್ಮರಿಸಿದರು.

ಸರ್ವಜನಾಂಗದ ಶಾಂತಿ ತೋಟ: ‘ಬೆಂಗಳೂರು ಒಂದು ಸುಂದರ ಮತ್ತು ಸಹೃದಯಿ ನಗರ. ಕುವೆಂಪು ಹೇಳಿದಂತೆ ನಿಜವಾದ ಅರ್ಥದಲ್ಲಿ ಇದು ‘ಸರ್ವ ಜನಾಂಗದ ಶಾಂತಿಯ ತೋಟ'. ದೇಶ-ವಿದೇಶಗಳ ಲಕ್ಷಾಂತರ ಜನರು ಸೌಹಾರ್ದದಿಂದ ಜೀವಿಸುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡ ಯಾರೊಬ್ಬರ ಸ್ವತ್ತೂ ಅಲ್ಲ. ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಎಲ್ಲ ಜನಾಂಗದ ಸ್ವತ್ತು' ಎಂದು ಅವರು ಬಣ್ಣಿಸಿದರು.

ರಾಮಕೃಷ್ಣ ಆಶ್ರಮಕ್ಕೆ ಚೆಕ್: ನನಗೆ ಇಂದು ಪ್ರದಾನ ಮಾಡಿದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ಪ್ರಶಸ್ತಿಯ ಮೊತ್ತ 5 ಲಕ್ಷ ರೂ.ಗಳನ್ನು ನನ್ನ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ನೀಡುವೆ ಎಂದು ಎಸ್ಸೆಂ ಕೃಷ್ಣ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

‘ಬಿತ್ತಿದನ್ನು ಬೆಳೆಯುತ್ತೇವೆ ಎಂಬ ಮಾತಿನಂತೆ, ಬಿತ್ತಿದ್ದು ನಾರಾಯಣಮೂರ್ತಿ. ಆದರೆ, ಬೆಳೆದಿದ್ದು ಮಾತ್ರ ನಾನು. ಬೆಂಗಳೂರಿನಲ್ಲಿ ಐಟಿ-ಬಿಟಿ ಇಲ್ಲದಿದ್ದರೆ ನಮ್ಮ ಮಕ್ಕಳಿಂದು ಬೇರೆ ರಾಜ್ಯ-ದೇಶಗಳಿಗೆ ಹೋಗಬೇಕಿತ್ತು. ಬೆಂಗಳೂರಿನ ಎಲ್ಲ ತಾಯಂದಿರು ಇಂದು ಸಂತೋಷದಿಂದ ಇರಲು ಮೂಲ ಕಾರಣ ಐಟಿ-ಬಿಟಿ. ಇಂದು ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆಯೇ ಇರುವಂತೆ ಆಗಿದೆ. ಹೀಗಾಗಿ ರಾಜ್ಯವೂ ಸಮೃದ್ಧವಾಗಿದೆ. ಬೇರೆ ರಾಜ್ಯಗಳ ಜನರು ನಮ್ಮ ಊರಿಗೆ ಕೆಲಸ ಹುಡುಕಿಕೊಂಡು ಬರುವಂತೆ ಆಗಿದೆ. ಇದರ ಹಿಂದೆ ಎಸ್ಸೆಂ ಕೃಷ್ಣ ಅವರ ಶ್ರಮವಿದೆ. ಬೆಂಗಳೂರು ಮಾದರಿಯಲ್ಲೇ ಹುಬ್ಬಳ್ಳಿಯನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಬೇಕು'

-ಸುಧಾಮೂರ್ತಿ ಇನ್ಫೋಸಿಸ್ ಸಹಸಂಸ್ಥಾಪಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News