×
Ad

ಮಳಲಿಪೇಟೆ ಮಸೀದಿ ವಿವಾದ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2022-06-27 19:36 IST

ಮಂಗಳೂರು, ಜೂ. 27: ಮಳಲಿಪೇಟೆ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸಿವಿಲ್ ನ್ಯಾಯಾಲಯದ ಆದೇಶವನ್ನು ತಡೆಹಿಡಿಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸ್ಥಳೀಯರಾದ ಧನಂಜಯ, ಮನೋಜ್ ಕುಮಾರ್ ಮತ್ತಿತರರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟನೆ ಕಾಯ್ದಿರಿಸಿದೆ.

ಮಸೀದಿಗೆ ಸಂಬಂಧಿಸಿದಂತೆ ಸ್ಥಳೀಯರಾದ ಧನಂಜಯ ಮತ್ತು ಮನೋಜ್ ಕುಮಾರ್ ಎಂಬವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ಮಸೀದಿ ಪರ ವಕೀಲರು ವಾದ ಮಂಡಿಸಿ, ಮಸೀದಿ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಗೆ ಬರುವುದಿಲ್ಲ. ಇದು ವಕ್ಫ್ ನ್ಯಾಯಾಲಯದ ಪರಿಧಿಗೆ ಬರುತ್ತದೆ ಎಂದಿದ್ದರು.

ಈ ಕುರಿತು ವಿಚಾರಣೆ ನಡೆಸಿದ್ದ ಮೂರನೇ ಹೆಚ್ಚುವರಿ ನ್ಯಾಯಾಲಯವು ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಗೆ ಒಳಪಡುತ್ತದೆಯೇ ಅಥವಾ ವಕ್ಫ್ ನ್ಯಾಯಾಲಯಕ್ಕೆ ಬರುತ್ತದೆಯೋ ಎಂಬ ಬಗ್ಗೆ ಪ್ರಥಮ ಪ್ರಾಶಸ್ತ್ಯ ದಲ್ಲಿ ವಿಚಾರಣೆ ಆರಂಭಿಸಿ ತೀರ್ಪು ನೀಡುವುದಾಗಿ ತಿಳಿಸಿತ್ತು.

ಇದರ ಬೆನ್ನಿಗೆ ಧನಂಜಯ, ಮನೋಜ್ ಕುಮಾರ್ ಸೇರಿದಂತೆ ಐವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ, ಮೂರನೇ ಹೆಚ್ಚುವರಿ ನ್ಯಾಯಾಲಯ ನೀಡುವ ತೀರ್ಪಿಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ತಾನು ಸೂಚಿಸುವವರೆಗೆ ಮಳಲಿ ಪೇಟೆ ಮಸೀದಿಗೆ ಸಂಬಂಧಿಸಿದ ಯಾವುದೇ ಪ್ರಕರಣದಲ್ಲಿ ತೀರ್ಪು ನೀಡದಂತೆ ತಡೆ ನೀಡಿತ್ತು. ಈ ಸಂಬಂಧ ಸಿವಿಲ್ ನ್ಯಾಯಾಲಯದ ಆದೇಶ ತಡೆಗೆ ನೀಡಲಾಗಿದ್ದ ಅರ್ಜಿಯ ವಿಚಾರಣೆ ಪೂರ್ಣ ಗೊಳಿಸಿರುವ ಹೈಕೋರ್ಟ್ ತೀರ್ಪು ಪ್ರಕಟನೆಯನ್ನು ಕಾಯ್ದಿರಿಸಿದೆ.

ಮಳಲಿ ಮಸೀದಿ ವಿವಾದ ಸಂಬಂಧ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹೈಕೋರ್ಟ್ ತೀರ್ಪು ನೀಡಲು ತಡೆ ನೀಡಿರುವ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿಯೂ ತೀರ್ಪು ಬಾಕಿ ಇದ್ದು, ಜುಲೈ 6ರಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಮಸೀದಿಗೆ ಸಂಬಂಧಿಸಿದಂತೆ ಎಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಆರ್ಟಿಸಿ ಸಂಬಂಧಿಸಿದ ವಿಚಾರಣೆಯೂ ಅಂತಿಮ ಹಂತದಲ್ಲಿದ್ದು ಜು.11 ರಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ‌‌ ಎಂದು‌ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News