ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

Update: 2022-06-27 16:31 GMT

ಮಂಗಳೂರು : ಇಪ್ಪತ್ತ ಮೂರು ವರ್ಷಗಳ ಕಾಲ ಆಡಳಿತ ನಡೆಸಿ ಇಂದಿನ ಬಹುದೊಡ್ಡ ಸುಸಜ್ಜಿತ ನಗರ ವೊಂದಕ್ಕೆ ಶಾಶ್ವತ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಸಕ  ವೇದವ್ಯಾಸ್ ಕಾಮತ್ ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ತುಳು ಭವನದ ಸಿರಿ ಚಾವಡಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ನಾಡಪ್ರಭು ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಸ್ತುಬದ್ಧ ಆಡಳಿತ, ಯೋಜನೆ-ಯೋಚನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ನೆನಪು ಮಾಡಿಕೊಳ್ಳಬೇಕು. ಮೂಲಭೂತ ಸೌಕರ್ಯ, ನಗರಾಭಿವೃದ್ಧಿ, ಕೃಷಿ, ನೀರಾವರಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಕೆಂಪೇಗೌಡರು ಜಾರಿಗೆ ತಂದರು. ತಮ್ಮ ಕೊನೆಯ ದಿನಗಳವರೆಗೂ ಅವುಗಳಿಗೆ ಚ್ಯುತಿ ಬಾರದಂತೆ ಸಮರ್ಥವಾಗಿ ಆಡಳಿತ ನಡೆಸಿ ಬಹುದೊಡ್ಡ ಸುಸಜ್ಜಿತ ನಗರವೊಂದಕ್ಕೆ ಶಾಶ್ವತ ಭದ್ರಬುನಾದಿ ಹಾಕಿದರು ಎಂದು ಹೇಳಿದರು.

ದ.ಕ.ಜಿಪಂ ಸಿಇಒ ಡಾ.ಕುಮಾರ್ ಮಾತನಾಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಬೋಳಿಯಾರ್, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ದ.ಕ.ಜಿಲ್ಲಾಧ್ಯಕ್ಷ ಸದಾನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ರಾಜೇಂದ್ರ ಭಟ್ ಕೆ. ಸಂದೇಶ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News