ತಲಪಾಡಿ ಗ್ರಾಮ ಸಭೆಯಲ್ಲಿ ಕುಡಿಯುವ ನೀರು, ತೆರಿಗೆ ಬಗ್ಗೆ ‌ಚರ್ಚೆ

Update: 2022-06-27 17:00 GMT

ಉಳ್ಳಾಲ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಲಪಾಡಿ ಗ್ರಾಮ ಸಭೆಯಲ್ಲಿ ನಡೆದಿದೆ.

ತಲಪಾಡಿ ಎಪಿಜೆ ಅಬ್ದುಲ್ ಕಲಾಂ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷೆ ಪುಷ್ಪಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಿಡಿಒ ಕೇಶವ ಪೂಜಾರಿ  ಗ್ರಾಮದ ವಿವಿಧ ವಾರ್ಡ್ ಗಳ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಲಾದ ಕ್ರಮ ಹಾಗೂ ನಿರ್ಣಯ ಗಳ ಬಗ್ಗೆ  ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ವೇಳೆ ಗ್ರಾಮಸ್ಥ ಮಹಿಳೆಯೊಬ್ಬರು ನನ್ನ ಮನೆಗೆ ಕುಡಿಯುವ ನೀರು ಪಂಚಾಯತ್ ಒದಗಿಸಿಲ್ಲ. ಇ ಕಾರಣ ದಿಂದ ಹಣ ಕೊಟ್ಟು ನೀರು ತರಬೇಕಾದ ಪರಿಸ್ಥಿತಿ ಬಂತು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಂಚಾಯತ್ ನ ಗಮನ ಸೆಳೆದರೂ ಪಂಚಾಯತ್ ಕಡೆಗಣಿಸಿದೆ ಎಂದು ತನ್ನ ನೋವನ್ನು ತೋಡಿಕೊಂಡರು. ಈ ಸಂದರ್ಭ ಪಿಡಿಒ ಪಂಪ್ ನ ಸಮಸ್ಯೆ ಯಿಂದ ನೀರು ಒದಗಿಸಲು ಸಾಧ್ಯ ಆಗಿಲ್ಲ ಎಂದು  ಉತ್ತರ ನೀಡಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಕುಡಿಯುವ ನೀರು ಒದಗಿಸಲು ಅನುದಾನ ಮೀಸಲಿಟ್ಟಿದ್ದೀರಿ.ಆದರೆ ಎಪ್ರಿಲ್ ತಿಂಗಳಿನಿಂದ ಸಮರ್ಪಕವಾಗಿ ನೀರು ಒದಗಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಈ ವೇಳೆ ಪಿಡಿಒ ಕೇಶವ ಪೂಜಾರಿ ಉತ್ತರಿಸಿ ಎ.1 ರಿಂದ ಮೇ 27 ವರೆಗೆ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಮಳೆ ಬಂದ ಕಾರಣ ನೀರು ಸರಬರಾಜು ನಿಲ್ಲಿಸಿದ್ದೇವೆ ಎಂದರು.

ಕುಡಿಯುವ ನೀರಿನ ವಿಚಾರದಲ್ಲಿ ಸಭೆಯಲ್ಲಿ ಕೆಲಕಾಲ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ರಾಷ್ಟ್ರೀಯ ಹೆದ್ದಾರಿ ಬಳಿ ಚರಂಡಿ, ತಂಗುದಾಣ ಸರಿಯಾಗಿಲ್ಲ.ಈ  ಕಾರಣ ದಿಂದ ಕೆಲವು ಮನೆಗಳಿಗೆ ನೀರು ನುಗ್ಗಿದೆ.ಈ ಬಗ್ಗೆ ಲಿಖಿತ ರೂಪದಲ್ಲಿ ಅರ್ಜಿ ನೀಡಿ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಸಭೆ ಗೆ ಕರೆಸಬೇಕು ಎಂದು ಒತ್ತಾಯಿಸಿದರೂ ಯಾಕೆ ಕರೆಸಲಿಲ್ಲ ಎಂದು ಪ್ರಶ್ನಿಸಿ ಗ್ರಾಮಸ್ಥರೊಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಮರ್ಪಕವಾಗಿ ಉತ್ತರ ಅಧಿಕಾರಿಗಳು ನೀಡದ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಅವರು ಟೇಬಲ್ ಮುಂದೆ ಜಮಾಯಿಸಿ ಉತ್ತರ ನೀಡುವಂತೆ ಒತ್ತಾಯಿಸಿದರು.

ಈ ವೇಳೆ ಪಿಡಿಒ ಕೇಶವ ಪೂಜಾರಿ ಅವರು ನಿಮ್ಮ ಲಿಖಿತ ಅರ್ಜಿ ರಾ.ಹೆ.ಇಲಾಖೆಗೆ ನೀಡಲಾಗಿದೆ. ರಾ.ಹೆ. ಇಲಾಖೆ ಅಧಿಕಾರಿಗಳನ್ನು ಸಭೆಗೆ ಬರಬೇಕೆಂದು ಆಹ್ವಾನ ನೀಡಲಾಗಿದೆ.ಕ್ಷಣದಲ್ಲಿ ಅವರಿಗೆ ಮಾಹಿತಿ ನೀಡಿ ಕರೆಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಅರ್ಧದಲ್ಲಿ ಎದ್ದು ಹೋದ ಅಧ್ಯಕ್ಷರು

ಸಭೆಯಲ್ಲಿ ತೆರಿಗೆ ಮತ್ತು ನೀರಿನ ಚರ್ಚೆ ನಡೆಯುವಾಗಲೇ ಸಭೆ ಮುಗಿಸದೇ ಅಧ್ಯಕ್ಷರು ಅರ್ಧದಲ್ಲೇ ಎದ್ದು ಹೋಗಿದ್ದು ಅಭಾಸವಾಗಿ ಕಂಡು ಬಂತು. ಈ ವೇಳೆ ನೋಡೆಲ್ ಅಧಿಕಾರಿ ಉಪಾಧ್ಯಕ್ಷರು ಇದ್ದಾರೆ ಸಭೆ ಮುಂದುವರಿಸಿ ಎಂದು ಸೂಚಿಸಿದರು.

ಮನೆ ತೆರಿಗೆ ಏರಿಕೆ ಮಾಡಿದ ವಿಚಾರ ದಲ್ಲಿ ಸಭೆಯಲ್ಲಿ ವ್ಯಾಪಕ  ಚರ್ಚೆ ನಡೆಯಿತು.ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ತೆರಿಗೆ ಇಳಿಕೆ ಮಾಡಲು ಒತ್ತಾಯಿಸಿ ದರು. ಕೊರೋನ ಬಳಿಕ ಮಹಿಳಾ ಸಭೆ ನಡೆಯಲಿಲ್ಲ. ಮಹಿಳಾ ಸಭೆ ಯಾಕೆ ಕರೆಯುವುದಿಲ್ಲ ಎಂದು ಗ್ರಾಮಸ್ಥ ಮಹಿಳೆಯೊಬ್ಬರು ಪ್ರಶ್ನಿಸಿ ಅಧ್ಯಕ್ಷರನ್ನು ತರಾಟೆಗೆ ತೆಗೆದು ಕೊಂಡರು. ಈ ವೇಳೆ ಪಿಡಿಒ ಮುಂದಿನ ಹಂತದಲ್ಲಿ ಮಹಿಳಾ ಸಭೆ ನಡೆಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮೀನಾ  ನೋಡೆಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ತಲಪಾಡಿ ಗ್ರಾಮ ಕರಣಿಕ ಶಿಲ್ಪ, ಪಿಡಿಒ ಕೇಶವ ಪೂಜಾರಿ, ತೋಟಗಾರಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ, ಶಿಕ್ಷಣ, ಕೃಷಿ, ಅರಣ್ಯ ಅಬಕಾರಿ, ಪೊಲೀಸ್, ಪಶು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News