ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-06-27 17:18 GMT

ಸುಬ್ರಹ್ಮಣ್ಯ: ಪೊಲೀಸ್ ಠಾಣೆ ಶಿಥಿಲಗೊಂಡಿರುವುದನ್ನು ಈಗಾಗಲೇ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿಗೆ ಹೊಸ ಠಾಣಾ ಕಟ್ಟಡ ನಿರ್ಮಿಸಲು ಅನುದಾನ ಇಟ್ಟು ಟೆಂಡರ್ ಪ್ರಕಿಯೆ ಕರೆಯಲಾಗಿದೆ. ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಕ್ರೀಯಾಯೋಜನೆ ಈಗಾಗಲೇ ತಯಾರಿಸಲಾಗಿದೆ. ಒಂದು ವರ್ಷದೊಳಗೆ ನೂತನ ಕಟ್ಟಡ ನಿರ್ಮಿಸಿ ಹೊಸ ಕಟ್ಟಡದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಸೋಮವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕುಕ್ಕೆ ಕ್ಷೇತ್ರಕ್ಕೆ ವಾರದ ಎರಡು ದಿನ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವುದರಿಂದ ಆ ದಿನದಲ್ಲಿ ಪೊಲೀಸರ ಅವಶ್ಯಕತೆ ಹೆಚ್ಚುವರಿ ಬೇಕಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಹೆಚ್ಚುವರಿ ಭಕ್ತರು ಭೇಟಿ ನೀಡುವ ಸಂದರ್ಭದಲ್ಲಿ ಬೇರೆ ಕಡೆಯಿಂದ ಡೆಪ್ಯುಟೇಷನ್‍ನಲ್ಲಿ ಹೆಚ್ಚುವರಿ ಸಿಬ್ಬಂದಿ ಅಥವಾ ಸುಬ್ರಹ್ಮಣ್ಯ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸುವ ಬಗ್ಗೆ ಚರ್ಚಿಸಿ ಕ್ರಮಗೊಳ್ಳುವ ಭರವಸೆ ನೀಡಿದರು. ನಗರ ಪ್ರದೇಶದಲ್ಲಿ ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದೆ. ಸುಬ್ರಹ್ಮಣ್ಯದಲ್ಲಿ ಸಿಸಿ ಕೆಮರಾ ಅಳವಡಿಸಲು ಕ್ರಮಕೈಗೊಳ್ಳಲಾಗುವುದು, ಈ ಬಗ್ಗೆ ದೇವಸ್ಥಾನದ ವತಿಯಿಂದಲೂ ಸಹಕಾರ ನೀಡಲು ಪ್ರಯತ್ನಿಸಲಾಗುವುದು. ಪೊಲೀಸ್ ಕುಟುಂಬದವರಿಗೆ ಸರಕಾರದಿಂದ ಏನೆಲ್ಲ ಸವಲತ್ತು ನೀಡಲಾಗುತ್ತದೋ ಅದನ್ನು ನೀಡಲಾಗಿದೆ ಎಂದರು.

ಠಾಣೆ ಪರಿಶೀಲಿಸಿದ ಗೃಹಸಚಿವರು

ಪೊಲೀಸ್ ಠಾಣೆಗೆ ಬೇಟಿ ನೀಡಿದ ಗೃಹಸಚಿವರನ್ನು ಠಾಣೆಯ ವತಿಯಿಂದ ಬ್ಯಾಂಡ್ ವಾದ್ಯ, ಗೌರವ ನೀಡುವ ಮೂಲಕ ಸ್ವಾಗತಿಸಲಾಯಿತು. ಬಳಿಕ ಠಾಣೆಗೆ ತೆರಳಿದ ಗೃ ಸಚಿವರು ಪರಿಶೀಲನೆ ನಡೆಸಿ ಠಾಣೆ ಶಿಥಿಲಗೊಂಡು, ಟಾರ್ಪಲ ಅಳವಡಿಕೆಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ನೂತನ ಕಟ್ಟಡ ಪ್ರಸ್ತಾವನೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದು ಬಳಿಕ ನೂತನ ಕಟ್ಟಡ ನಿರ್ಮಾಣವಾಗಲಿರುವ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಸೂಚಿಸಿದರು. ಈ ವೇಳೆ ಸುಬ್ರಹ್ಮಣ್ಯ ಠಾಣೆ ಹೆಚ್ಚುವರಿ ಸಬ್‍ಇನ್ಸ್ಪೆಕ್ಟರ್ ಬೇಡಿಕೆಯನ್ನು ಅಧಿಕಾರಿಗಳು ತಿಳಿಸಿದರು. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಸಹಾಯಕ ಉಪನಿರೀಕ್ಷಕ ಕರಣಾಕರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವುದರಿಂದ ಈ ಭಾಗದವರಿಗೆ ದೂರವಿರುವ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ.  ಪುತ್ತೂರಿಗೆ ಎಸ್ಪಿ ಕಚೇರಿ ಬರುವುದರಿಂದ ಈ ಭಾಗದಲ್ಲಿ ಪ್ರಯೋಜನ ವಾಗುವ ಜತೆಗೆ ಜನರಿಗೆ ಹತ್ತಿರವಾಗಲಿದೆ ಎಂಬ ಬಗ್ಗೆ ಇಲ್ಲಿನ ಶಾಸಕರು ತಿಳಿಸಿದ್ದಾರೆ. ಈ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದರು.

ಪಾರದರ್ಶನ ತನಿಖೆ

ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಅತ್ಯಂತ ಪಾರದರ್ಶಕ ತನಿಖೆ ನಡೆಯುತ್ತಿದೆ. ಬೇಗ ತನಿಖೆ ಮುಗಿಯಲಿದೆ. ಡಿವೈಎಸ್ಪಿಯಾದಿಯಾಗಿ ತಪ್ಪಿತಸ್ಥರನ್ನು ವಶಕ್ಕೆ ಪಡೆದ ತನಿಖೆ ನಡೆಸಿ ಬಂಧಿಸಲಾಗಿದೆ. ಎರಡನೇಯದಾಗಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ಎಫ್‍ಎಸ್‍ಎಲ್ ವರದಿ ಬರಬೇಕಿದೆ. ಇದರಿಂದ ಸ್ವಲ್ಪ ತಡವಾಗುತ್ತಿದೆ. ತಪ್ಪಿತಸ್ಥರನ್ನು ಕಂಡಿತಾ ಜೈಲು ಸೇರಿಸುತ್ತೇವೆ. ಪರೀಕ್ಷೆಗಳಲ್ಲಿ ಇಂತಹಗಳು ನಡೆಯ ಬಾರದು. ತನಿಖೆ ಪೂರ್ಣಗೊಂಡ ಬಳಿಕ ಮರು ಪರೀಕ್ಷೆ ನಡೆಸುವ ಬಗ್ಗೆ ಸದ್ಯಕ್ಕೆ ತೀರ್ಮಾಣ ತೆಗೆದುಕೊಳ್ಳ ಲಾಗಿದೆ. ಪ್ರಾಮಾಣಿಕ ಅಭ್ಯರ್ಥಿಗಳೂ ಮನವಿ ಸಲ್ಲಿಸಿದ್ದಾರೆ, ಯಾವ ರೀತಿ ಮುಂದುವರಿಯಲಾಗುತ್ತದೋ ಮತ್ತು ಕೋರ್ಟ್ ತೀರ್ಮಾಣ ಏನು ಎಂಬ ಬಗ್ಗೆ ತಿಳಿದು ಕ್ರಮಕೈಗೊಳ್ಳಲಾಗುವುದು.

ಅಗ್ನಿಪಥ್ ಉತ್ತಮ ಯೋಜನೆ

ಅಗ್ನಿಪಥ್ ಉತ್ತಮ ಯೋಜನೆಯಾಗಿದೆ. ಇದಕ್ಕೆ ಯುವಜನತೆ ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ. ಈ ಯೋಜನೆಯಲ್ಲಿ ತರಭೇತಿ ಪಡೆದವರಿಗೆ ರಾಜ್ಯದ ರಕ್ಷಣೆಗೆ ಸಂಬಂಧಿಸಿದ ಇಲಾಖೆಯಲ್ಲೂ ರಿಸರ್ವ್ ನೀಡಲಾಗುವುದು. ಸರಕಾರ ಮಾಡಿರುವ ಯೋಜನೆಗಳನ್ನು ವಿರೋಧಿಸುವ ರಾಜಕೀಯ ಈ ದೇಶದ ಕಪ್ಪುಚುಕ್ಕೆ ಇದು ಹೋಗಬೇಕಿದೆ ಎಂದು ಪ್ರತಿಕ್ರಿಯಿಸಿದರು.

ರಾಹುಲ್ ಗಾಂಧಿಯನ್ನು ವಿಚಾರಣೆಗೆ ಕರೆದಿರುವುದನ್ನು ವಿರೋಧಿಸುವುದು ಯಾಕೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಎಂಬುದು ನಮ್ಮಲ್ಲಿ ಇಲ್ಲ ಎಂದರು.

ಹೇಳಿಕೆ ತಪ್ಪು

ಪ್ರತ್ಯೇಖ ರಾಜ್ಯ ರಚನೆ ಹೇಳಿಕೆ ತಪ್ಪು. ಯಾವ ಹಿನ್ನಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಉಮೇಶ್ ಕತ್ತಿಯಾದಿಯಾಗಿ ಯಾರೆಲ್ಲ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಇದ್ದಾರೋ, ಅವರೆಲ್ಲ ಆ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಗೆ ಅನುದಾನ ತೆಗೆದುಕೊಂಡಿದ್ದಾರೆ. ಉಮೇಶ್ ಕತ್ತಿ ಈ ಮಾತನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ನಾನು ಹೇಳುತ್ತೇನೆ ಎಂದರು. ಪಠ್ಯಪುಸ್ತಕದಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದರು. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸುವ ಕೆಲಸಗಳಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News