​ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ

Update: 2022-06-29 02:40 GMT
ಸಾಂದರ್ಭಿಕ ಚಿತ್ರ

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು timesofindia.com ವರದಿ ಮಾಡಿದೆ.

ರೂಪಾಯಿ ಮೌಲ್ಯ ಪ್ರತಿ ಡಾಲರ್‍ಗೆ 78.84 ರೂಪಾಯಿ ಆಗಿದ್ದು, ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರ ಒತ್ತಡ ಮತ್ತು ಹೆಚ್ಚುತ್ತಿರುವ ಕಚ್ಚಾತೈಲದ ಬೆಲೆ ಇದಕ್ಕೆ ಪ್ರಮುಖ ಕಾರಣ. ವಿದೇಶಿ ನಾನ್-ಡಿರೈವೇಬಲ್ ಮಾರುಕಟ್ಟೆಯಲ್ಲಿ ಪ್ರತಿ ಡಾಲರ್‍ಗೆ 79 ರೂಪಾಯಿ ದರದಲ್ಲಿ ವಹಿವಾಟು ನಡೆಸಿದ್ದು, ಡಾಲರ್ ಎದುರು ರೂಪಾಯಿ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಸೋಮವಾರ ಸಮಮಟ್ಟವನ್ನು ಕಂಡಿದ್ದ ರೂಪಾಯಿ ಮಂಗಳವಾರ ದುರ್ಬಲವಾಗಿಯೇ ವಹಿವಾಟು ಆರಂಭಿಸಿತು. ಆರ್ಥಿಕ ಹಿಂಜರಿತದ ಭೀತಿಯಿಂದ ತೈಲ ಬೆಲೆ ಏರಿಸಿರುವುದು ಡಾಲರ್‍ನ ನಾಗಾಲೋಟಕ್ಕೆ ಕಾರಣವಾಯಿತು. ಮಂಗಳವಾರ 78.53ರಲ್ಲಿ ವಹಿವಾಟು ಆರಂಭಿಸಿದ ರೂಪಾಯಿ ತಕ್ಷಣವೇ 78.60ಕ್ಕೆ ಕುಸಿಯಿತು., ಮಧ್ಯಾಹ್ನದ ಬಳಿಕ ದೇಶಿಯ ಘಟಕ ಮತ್ತಷ್ಟು ದುರ್ಬಲಗೊಂಡು 78.84ಕ್ಕೆ ಕುಸಿಯಿತು. ಸಾರ್ವಕಾಲಿಕ ಕನಿಷ್ಠಮಟ್ಟವಾದ 78.79 ರೂಪಾಯಿಯೊಂದಿಗೆ ದಿನ ಮುಕ್ತಾಯಗೊಳಿಸಿದೆ. ಡಾಲರ್‍ಗೆ ಇರುವ ಬೇಡಿಕೆಯನ್ನು ಈಡೇರಿಸಲು ಆರ್‌ಬಿಐ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಮೂಲಕ ಮಧ್ಯಪ್ರವೇಶಿಸಿದೆ ಎಂದು ಡೀಲರ್‍ಗಳು ಹೇಳಿದ್ದಾರೆ.

"ಎಫ್ ಆ್ಯಂಡ್ ಓ (ಫ್ಯೂಚರ್ಸ್ ಆ್ಯಂಡ್ ಆಪ್ಷನ್ಸ್) ನಿರ್ಣಯದಿಂದಾಗಿ ಡಾಲರ್‍ಗೆ ಅಪಾರ ಬೇಡಿಕೆ ಕಂಡುಬಂದಿದೆ. ಅಂದಾಜು 5-6 ಶತಕೋಟಿ ಡಾಲರ್‍ಗೆ ನಿರ್ಣಯವಾಗಿದೆ. ಆರ್‍ಬಿಐ ಮಧ್ಯಪ್ರವೇಶಿಸಿ ರೂಪಾಯಿ 79ಕ್ಕಿಂತ ಕೆಳಮಟ್ಟಕ್ಕೆ ಕುಸಿಯುವುದನ್ನು ತಡೆದಿದೆ. ಕಳೆದ ಫೆಬ್ರುವರಿ 24ರಿಂದೀಚೆಗೆ ರೂಪಾಯಿ ಕುಸಿತದ ಹಾದಿಯಲ್ಲಿದೆ" ಎಂದು ಯುನೈಟೆಡ್ ಫೈನಾನ್ಶಿಯಲ್ ಕನ್ಸಲ್ಟೆಂಟ್‍ನ ಕೆ.ಎನ್.ಡೇ ಹೇಳುತ್ತಾರೆ.

ಸದ್ಯದಲ್ಲೇ ರೂಪಾಯಿ 79ರ ಮಟ್ಟದಿಂದಲೂ ಕೆಳಕ್ಕೆ ಕುಸಿಯುವ ಅಪಾಯವಿದೆ ಎಂದು ಎಬಿಕ್ಸ್ ಕ್ಯಾಶ್ ವ‌ರ್ಲ್ಡ್  ಮನಿಯ ಹರಿಪ್ರಸಾದ್ ಎಂ.ಪಿ. ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ತೈಲದ ಬೆಲೆ ಏರುಗತಿಯಲ್ಲಿರುವುದು ವಿನಿಮಯ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News