ಮುಸ್ಲಿಂ ಮತದಾರರು ಕೈ ತಪ್ಪುವ ಭೀತಿ; ಕಾಂಗ್ರೆಸ್‌ ನಾಯಕರಿಂದ ಸಭೆ

Update: 2022-06-29 08:06 GMT

ಬೆಂಗಳೂರು: ಅಲ್ಪಸಂಖ್ಯಾತರು, ಪ್ರಮುಖವಾಗಿ ಮುಸ್ಲಿಂ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭೀತಿಯನ್ನು ಕಾಂಗ್ರೆಸ್‌ ಪಕ್ಷ ಎದುರಿಸುತ್ತಿರುವುದರಿಂದ ಪಕ್ಷದ ಉನ್ನತ ನಾಯಕರು ಹಾಗೂ ರಾಜ್ಯ ಮಟ್ಟದ ನಾಯಕರ ಸಭೆ ದಿಲ್ಲಿಯಲ್ಲಿ ಮಂಗಳವಾರ ನಡೆದಿದೆ.

ಪಕ್ಷದ ʻಪ್ರಮುಖʼ ಮತ ಬ್ಯಾಂಕ್‌ ಅನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸುವ  ಉದ್ದೇಶವನ್ನು ಈ ಸಭೆ ಹೊಂದಿತ್ತು.

ಈ ಚಿಂತನಮಂಥನ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್‌, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮತ್ತು ವಿಪಕ್ಷ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.

ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಇತ್ತೀಚೆಗೆ ಪಕ್ಷದ ವತಿಯಿಂದ ನಡೆಸಲಾದ ಸಮೀಕ್ಷೆಯ ವಿವರಗಳನ್ನು ಸಭೆಯ ಮುಂದೆ  ಪಕ್ಷದ ಚುನಾವಣಾ ತಂತ್ರಜ್ಞ ಸುನೀಲ್‌ ಕಣುಗೋಲು ಇರಿಸಿದರು.

ಈ ಸಮೀಕ್ಷೆಯ ಪ್ರಕಾರ ಶೇ 20ರಿಂದ ಶೇ 30 ರಷ್ಟು ಅಲ್ಪಸಂಖ್ಯಾತರು, ಪ್ರಮುಖವಾಗಿ ಮುಸ್ಲಿಮರ ಮತಗಳು ಎಸ್ಡಿಪಿಐ ಅಥವಾ ಎಐಎಂಐಎಂ ನತ್ತ ಸರಿದಿವೆ. ಹಿಂದೆ ಕರಾವಳಿ ಕರ್ನಾಟಕ ಮತ್ತು ಕೊಡಗು ಜಿಲ್ಲೆಗೆ ಸೀಮಿತವಾಗಿದ್ದ ಎಸ್ಡಿಪಿಐ ಈಗ ರಾಜ್ಯವ್ಯಾಪಿ ತನ್ನ ಸಂಘಟನೆ ವಿಸ್ತರಿಸುತ್ತಿರುವುದರಿಂದ ಕಾಂಗ್ರೆಸ್‌ ಮತ ಬ್ಯಾಂಕ್‌ ಮೇಲೆ ಹೊಡೆತ ಬೀಳುವಂತಾಗಿದೆ ಎಂಬ ಅಭಿಪ್ರಾಯವಿದೆ.

ಪ್ರಮುಖವಾಗಿ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ಎಐಎಂಐಎಂಗೆ ಉತ್ತಮ ಬೆಂಬಲವಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆಯೆನ್ನಲಾಗಿದೆ.

ಹಿಜಾಬ್‌, ಹಲಾಲ್‌ ವಿವಾದ ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ ಮುಂತಾದ ವಿವಾದಗಳು ಹುಟ್ಟಿಕೊಂಡಾಗ ಪಕ್ಷವು ಮುಸ್ಲಿಮರ ಪರ ನಿಲ್ಲಲು ವಿಫಲವಾಗಿರುವುದರಿಂದ ಅಲ್ಪಸಂಖ್ಯಾತರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರಲ್ಲದೆ ಯಾವುದೇ ಹಿಂಜರಿಕೆಯಿಲ್ಲದೆ ಅಲ್ಪಸಂಖ್ಯಾತರ ಪರ ನಿಲ್ಲಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಪಕ್ಷ ತಮ್ಮನ್ನು ಕೈಬಿಟ್ಟಿದೆ ಎಂಬ ಅನಿಸಿಕೆ ಅಲ್ಪಸಂಖ್ಯಾತರಿಗೆ ಬಾರದಂತೆ ಅವರ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ರಾಹುಲ್‌ ಗಾಂಧಿ ಸಭೆಯಲ್ಲಿ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News