ಬೆಂಗಳೂರಿನ ಮುಹಮ್ಮದ್ ಝುಬೈರ್ ಮನೆಯಲ್ಲಿ ದಿಲ್ಲಿ ಪೊಲೀಸರಿಂದ ಶೋಧ

Update: 2022-06-30 13:50 GMT

ಬೆಂಗಳೂರು, ಜೂ.30: ಧಾರ್ಮಿಕ ಭಾವನೆ ಆರೋಪದಡಿ ಹೊಸದಿಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಪತ್ರಕರ್ತ, ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಸಂಸ್ಥೆಯ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದಾರೆ. 

ಗುರುವಾರ ಝುಬೈರ್ ಅವರನ್ನು ಬೆಂಗಳೂರಿಗೆ ಕರೆತಂದ ಹೊಸದಿಲ್ಲಿ ಪೊಲೀಸರು, ಇಲ್ಲಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾವಲ್ ಭೈರಸಂದ್ರದಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಿದರು.

ಪ್ರಕರಣ ಸಂಬಂಧ ಝುಬೈರ್ ಅನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿರುವ ತನಿಖಾಧಿಕಾರಿಗಳು, ಕೆಲ ದಾಖಲೆಗಳ ಜಪ್ತಿಗಾಗಿ ಇಲ್ಲಿನ ಕಾವಲ್ ಭೈರಸಂದ್ರ ಕರೆತಂದಿದ್ದರು.ಅದರಂತೆ ಮನೆಯಲ್ಲಿ ಶೋಧ ನಡೆಸಿ, ಅಕ್ಕಪಕ್ಕದ ನಿವಾಸಿಗಳ ಹೇಳಿಕೆ ದಾಖಲಿಸಿಕೊಂಡರು.

ಆನಂತರ, ಡಿಜೆಹಳ್ಳಿ ಪೊಲೀಸ್ ಠಾಣೆಗೆ ಝುಬೈರ್ ಅವರನ್ನು ಕರೆದೊಯ್ದ ತನಿಖಾಧಿಕಾರಿಗಳು, ಕೆಲ ಹೊತ್ತು ಕೂರಿಸಿದ್ದರು. ನಂತರ, ಬಿಗಿ ಭದ್ರತೆಯಲ್ಲಿ ಮನೆಗೆ ಕರೆದೊಯ್ದು ಶೋಧ ನಡೆಸಿದರು.

ಸತತ ಮೂರು ಗಂಟೆಗಳ ಕಾಲ ಶೋಧ ನಡೆಸಿದ ತನಿಖಾಧಿಕಾರಿಗಳು, ಫೊಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಮಹಜರು ಮಾಡಿಕೊಳ್ಳುವ ಜತೆಗೆ ಕೆಲ ದಾಖಲೆಗಳನ್ನು ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News