ಸಿಎಂ ಬೊಮ್ಮಾಯಿ ನಿವಾಸದ ಬಳಿಯೇ ಬ್ಯಾನರ್!

Update: 2022-06-30 13:21 GMT

ಬೆಂಗಳೂರು, ಜೂ.30: ಬೆಂಗಳೂರಿನಲ್ಲಿ ಬ್ಯಾನರ್ ನಿಷೇಧ ಸಂಬಂಧ ಹೈಕೋರ್ಟ್ ಆದೇಶವಿದ್ದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಸಮೀಪವೇ ಬ್ಯಾನರ್ ಅಳವಡಿಕೆ ಮಾಡಿರುವ ದೃಶ್ಯ ಸಾಮಾನ್ಯವಾಗಿದೆ.

ಇಲ್ಲಿನ ಆರ್.ಟಿನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಹತ್ತಾರು ವಿದ್ಯುತ್ ಕಂಬ, ಮರಗಳಿಗೆ ಬ್ಯಾನರ್‍ಗಳನ್ನು ಅಳವಡಿಕೆ ಮಾಡಲಾಗಿದೆ.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಹುಟ್ಟುಹಬ್ಬದ ಹಿನ್ನೆಲೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್‍ಅಝೀಂ ಪುತ್ರ ಜೀಶಾನ್ ಅಝೀಂ ಈ ಬ್ಯಾನರ್‍ಗಳನ್ನು ಹಾಕಿರುವ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಹೆಚ್ಚೂಕಡಿಮೆ ಎಲ್ಲ ಮರಗಳಿಗೆ ಕೇಸರಿ ತೋರಣ ಕಟ್ಟಿದ್ದು, ವಾಹನ ಸವಾರರ ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಇಂತಹ ಹಗ್ಗದಿಂದ ಅಪಾಯ ಸಂಭವಿಸಿ, ಸಾವು, ನೋವುಗಳಾಗಿರುವ ಉದಾಹರಣೆಯೂ ನಮ್ಮ ಕಣ್ಣಮುಂದೆಯೇ ಇವೆ. ಆದರೂ ಸಹ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ವಿವಿಧೆಡೆ ಅಪಾಯಕಾರಿ ಬಂಟಿಂಗ್ಸ್ ರಾರಾಜಿಸುತ್ತಲೇ ಇವೆ ಎಂದು ಸ್ಥಳೀಯರು ದೂರಿದ್ದಾರೆ.

ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಅಪಾಯಕಾರಿ ತೋರಣಗಳನ್ನು ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಅವರು ಸಹಾಯಕ ಕಾರ್ಯಪಾಲಕ ಅಭಿಯಂತರರ ಜೊತೆ ಕಾರ್ಯಾಚರಣೆ ನಡೆಸಿ, ಮೊದಲ ಬಾರಿಗೆ ಬ್ಯಾನರ್ ಅಳವಡಿಸಿದವರಿಗೆ ಎಚ್ಚರಿಕೆ ನೀಡಬೇಕು. ಎಚ್ಚರಿಕೆ ನಂತರವೂ ಇದೇ ಪುನರಾವರ್ತನೆಯಾದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News