VIDEO - ‘ನಾವೇ ಬೇಡ ಜಂಗಮರು, ಎಸ್ಸಿ ಮೀಸಲಾತಿ ನೀಡಿ’; ಬೇಡಜಂಗಮ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಹೋರಾಟ

Update: 2022-06-30 13:40 GMT

ಬೆಂಗಳೂರು, ಜೂ.30: ನಾವೇ ಬೇಡ ಜಂಗಮರು, ನಮ್ಮಲ್ಲಿ ಯಾವುದೇ ಬೇಧವಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ನೀಡಿರುವ ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯ ನ್ಯಾಯಯುತವಾಗಿ ನೀಡಬೇಕು ಎಂದು ವಿವಿಧ ಮಠಗಳ ಸ್ವಾಮೀಜಿಗಳು ಒಕ್ಕಲೂರಿನಿಂದ ಆಗ್ರಹಿಸಿದರು.

ಗುರುವಾರನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ’ದಲ್ಲಿ ಬೇಡಜಂಗಮ ಸಮುದಾಯದ ಹಲವು ಸ್ವಾಮೀಜಿಗಳು ಪಾಲ್ಗೊಂಡು ಹಕ್ಕೊತ್ತಾಯ ಮಂಡಿಸಿದರು.

ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ, ಬೇಡಜಂಗಮ ಸಮುದಾಯದ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಮತ್ತೊಂದೆಡೆ ನಾವು ಸತ್ಯವನ್ನು ಪ್ರತಿಪಾದಿಸುತ್ತಿದ್ದೇವೆ. ನಮ್ಮ ಕುಲವನ್ನೇ ನಾಶಪಡಿಸಲು ಸದನ ಸಮಿತಿಯ ಕೆಲ ಶಾಸಕರು ಪ್ರಯತ್ನಿಸಿದ್ದಾರೆ. ನಮ್ಮ ಕುಲದ ಮರಣ ಶಾಸನ ಬರೆಯುವ ಯತ್ನ ಮಾಡಲಾಗಿದೆ. ಹೀಗಾಗಿ, ಸತ್ಯಪ್ರತಿಪಾದನೆಗಾಗಿ ಈ ಹೋರಾಟ ಮಾಡಲಾಗುತ್ತಿದೆ ಎಂದರು.

ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ್ದಾರೆ. ಹೀಗಾಗಿ, ಸರಕಾರದ ಮುಂದೆ ಬೇಡಿಕೆಯನ್ನು ಮಂಡಿಸಿದ್ದೇವೆ ಎಂದ ಅವರು, ಕೇಂದ್ರ ಸರಕಾರದ ಪರಿಶಿಷ್ಟ ಜಾತಿ ಕಾಯ್ದೆಯಲ್ಲಿನ ಬೇಡಜಂಗಮ ಕುರಿತು, ವಿಧಾನಸಭೆಯಲ್ಲಿ ಅನಗತ್ಯವಾಗಿ ಅಸಂಬದ್ಧವಾಗಿ ಹಾಗೂ ಅಸಂವಿಧಾನಿಕವಾಗಿ ಚರ್ಚೆ ನಡೆಯುತ್ತಿರುವ ಬಗ್ಗೆ ನಮ್ಮ ಒಕ್ಕೂಟವು ಆತಂಕ ವ್ಯಕ್ತಪಡಿಸಬಯಸುತ್ತದೆ ಎಂದು ತಿಳಿಸಿದರು.

ಜಂಟಿಯಾಗಿ ಸ್ವಾಮೀಜಿಗಳು ಪ್ರತಿಕ್ರಿಯಿಸಿ, ಬೇಡ ಜಂಗಮ ಸಮಾಜವು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಮಾಜದ ಬೇಡಿಕೆಗಳ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ಹೇರಲು ಸಂಘಟಿತ ಹೋರಾಟ ನಡೆಸಲಾಗುತ್ತಿದೆ. ಅಭಿವೃದ್ಧಿ ನಿಗಮ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಸಂವಿಧಾನದಲ್ಲಿ ಉಲ್ಲೇಖಿಸಿರುವ 101 ಪರಿಶಿಷ್ಟರ ಪಟ್ಟಿಯಲ್ಲಿ ಬೇಡ ಜಂಗಮ ಹೆಸರು 19ನೆ ಸ್ಥಾನದಲ್ಲಿದೆ. ಸಂವಿಧಾನ ರಚನೆಯಾಗಿ 73 ವರ್ಷ ಕಳೆದರೂ ದೊರೆಯಬೇಕಾದ ಸೌಲಭ್ಯ ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಠಾಧೀಶರೆಲ್ಲ ಒಂದುಗೂಡಿ ಹೋರಾಟ ನಡೆಸುತ್ತಿದ್ದೇವೆ. ಇದು ಯಾವುದೇ ಜಾತಿ, ಸಮುದಾಯದ ವಿರುದ್ಧದ ಹೋರಾಟವಲ್ಲ. ಸಂವಿಧಾನಬದ್ಧ ಹಕ್ಕಿಗೆ ಹೋರಾಟ ಎಂದರು.

ಸತ್ಯಾಗ್ರಹದಲ್ಲಿ ಸಂಗಮೇಶ್ವರ ಸ್ವಾಮೀಜಿ, ಗುಹೇಶ್ವರ ಸ್ವಾಮೀಜಿ, ಪಂಚಾಕ್ಷ ಸಿವ್ಹಾಚಾರ್ಯ ಸ್ವಾಮೀಜಿ, ರವಿಶಂಕರ್ ಸ್ವಾಮೀಜಿ ಗೋಕಾಕ್, ಚನ್ನಬಸವ ಸ್ವಾಮೀಜಿ, ಅಡವಿ ಸಿದ್ದೇಶ್ವರ್ ಸ್ವಾಮೀಜಿ, ಗಂಗಾಧರ ಮಹಾಸ್ವಾಮಿ, ಗುರು ಮಡಿವಾಳೇಶ್ವರ ಸ್ವಾಮೀಜಿ, ಕಲ್ಯಾಣ ಮಹಾಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News