ಹೃದಯಾಘಾತದಿಂದ ಸಿಪಿಐ ಹಿರಿಯ ಮುಖಂಡ ಹರಿಗೋವಿಂದ ನಿಧನ

Update: 2022-06-30 14:07 GMT
ಹರಿಗೋವಿಂದ

ಬೆಂಗಳೂರು, ಜೂ. 30: ‘ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ಹಿರಿಯ ಮುಖಂಡ ಹಾಗೂ ಎಐಟಿಯುಸಿ ಕಾರ್ಯಾಧ್ಯಕ್ಷರೂ ಆಗಿದ್ದ ಎಂ.ಡಿ.ಹರಿಗೋವಿಂದ ಅವರು ಗುರುವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹರಿಗೋವಿಂದ ಅವರಿಗೆ 76 ವರ್ಷ ವಯಸ್ಸಾಗಿದ್ದು, ಪತ್ನಿ ರೀಣಾ ಹರಿಗೋವಿಂದ, ಮಕ್ಕಳಾದ ದೀಪಾ, ಪ್ರಕಾಶ್ ಮತ್ತು ರಾಕೇಶ್, ಬಂಧು-ಮಿತ್ರರು ಸೇರಿದಂತೆ ಅಪಾರ ಸಂಖ್ಯೆಯ ಪಕ್ಷದ ಒಡನಾಡಿಗಳನ್ನು ಅಗಲಿದ್ದಾರೆ. ಬೆಂಗಳೂರಿನ ಬಸವೇಶ್ವರನಗರ ಮೂಲದ ಹರಿಗೋವಿಂದ ಅವರು 50 ವರ್ಷಗಳಿಂದ ಸಿಪಿಐ ಪಕ್ಷದ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಹಲವು ಕಾರ್ಮಿಕ ಸಂಘಟನೆಗಳ ನಾಯಕರೂ ಆಗಿದ್ದ ಹರಿಗೋವಿಂದ ಅವರು ಗುರುವಾರ ಸಂಜೆ 4:30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಲ್ಲಿನ ವೈಯಾಲಿ ಕಾವಲ್‍ನಲ್ಲಿರುವ ಸಿಪಿಐ ಕೇಂದ್ರ ಕಚೇರಿ ಘಾಟ್ಗೆ ಭವನದಲ್ಲಿ ನಾಳೆ ಬೆಳಗ್ಗೆ 9ಗಂಟೆಯ ವರೆಗೆ ಇರಿಸಲಾಗುವುದು. ಆ ಬಳಿಕ ಬೌರಿಂಗ್ ಆಸ್ಪತ್ರೆಗೆ ದೇಹದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹರಿಗೋವಿಂದ ಅವರ ನಿಧನಕ್ಕೆ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News