ಸಾಲುಮರದ ತಿಮ್ಮಕ್ಕಗೆ 'ಪರಿಸರ ರಾಯಭಾರಿ' ಗೌರವ, ಸಚಿವ ಸಂಪುಟ ದರ್ಜೆಯ ಸ್ಥಾನಮಾನ; ಸಿಎಂ ಬೊಮ್ಮಾಯಿ

Update: 2022-06-30 14:26 GMT

ಬೆಂಗಳೂರು, ಜೂನ್ 30: ಸಾಲು ಮರದ ತಿಮ್ಮಕ್ಕನಿಗೆ  ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಿ   ಆಕೆ ಬಯಸಿದಲ್ಲಿ ಹೋಗಿ ಪ್ರಚಾರ ಕೈಗೊಳ್ಳಲು ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

 ಅವರು ಇಂದು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಇವರ ವತಿಯಿಂದ ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ‌ಆಯೋಜಿಸಿರುವ ವೃಕ್ಷ ಮಾತೆ, ಪದ್ಮಶ್ರೀ ನಾಡೋಜ, ಡಾ. ಸಾಲು ಮರದ ತಿಮ್ಮಕ್ಕ ಅವರ 111ರ ಜನುಮ ಸಂಭ್ರಮ  ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ  ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು .

ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. 

ವೆಬ್ ಸೈಟ್ ಅಭಿವೃದ್ಧಿ

ತಿಮ್ಮಕ್ಕ ವೆಬ್ ಸೈಟ್ ಅಭಿವೃದ್ಧಿ ಪಡಿಸಿ ಭಾರತದ ತುಂಬಾ ಪ್ರಚುರಪಡಿಸಲು ವಾರ್ತಾ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸಾಲುಮರದ ತಿಮ್ಮಕ್ಕ ಅಲ್ಲದೇ  ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ನ್ನು ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದರು. 

ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ  ನಿವೇಶನ ನೀಡಿ ನೋಂದಾಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಾಧನೆ ಮಾಡಲು ಪದವಿ, ನೆರವು ಅವಕಾಶಗಳು ಅಗತ್ಯ ವಿಲ್ಲ. ಒಂದು ಧ್ಯೇಯ ಇದ್ದಲ್ಲಿ ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಬದಲಾವಣೆ ತರುವ ಪ್ರಭಾವಿ ಶಕ್ತಿಯಾಗಬಹುದು ಎನ್ನುವ ಉದಾಹರಣೆ ನಮ್ಮವರೇ ಆದ ಸಾಲು ಮರದ ತಿಮ್ಮಕ್ಕ ಎಂದರು.

ತಿಮ್ಮಕ್ಕ ಬಹು ದೊಡ್ಡ ಪ್ರೇರಣಾ ಶಕ್ತಿ

ಸಾಲು ಮರದ ತಿಮ್ಮಕ್ಕನ ಮುಖದಲ್ಲಿ ಮುಗ್ಧತೆ ಇದೆ. ಅವರ ಪ್ರಾಂಜಲ ಮನಸ್ಸು ಮತ್ತು ಶುದ್ಧ ಅಂತ:ಕಾರಣದಿಂದ ಮಾಡಿದ ಕಾಯಕಯೋಗದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆ ಕಡಿಮೆ ಸಾಧನೆಯಲ್ಲ. ಪ್ರಶಸ್ತಿ ಗಳು ತಿಮ್ಮಕ್ಕ ನನ್ನು ಹುಡುಕಿಕೊಂಡು ಬಂದಿವೆ. ಆಕೆಯ ಕತೃತ್ವ ಶಕ್ತಿ ಅಷ್ಟಿದೆ.   ತಮ್ಮ  ಊರಿನ ನಾಲ್ಕು ಕಿಮೀ ಉದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಅಸಾಮಾನ್ಯ. ಸಾಲು ಮರದ ತಿಮ್ಮಕ್ಕ ಪ್ರಸಿದ್ದರಾದ ನಂತರ    ಬಹಳ ಜನರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ಶಾಲೆ ಹಾಗೂ ಊರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅದ್ಭುತವಾಗಿದೆ. ಆಕೆ ಅಷ್ಟು ದೊಡ್ಡ ಪ್ರೇರಣಾ ಶಕ್ತಿ ಎಂದರು. 

ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು

ಅವಕಾಶಗಳಿಲ್ಲದಾಗ ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಿದಾಗ ತನ್ನಿಂದ ತಾನೇ ಪ್ರಸಿದ್ಧಿಗೆಬರುತ್ತದೆ.  ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ತಾವೇ ಅವಕಾಶಗಳನ್ನು ಸೃಷ್ಟಿ ಸಿಕೊಳ್ಳುವವರು ಚಿರಸ್ಥಾಯಿಯಾಗುತ್ತಾರೆ. ತನ್ನ ಯಶಸ್ಸು ಲೋಕಕಲ್ಯಾಣಕ್ಕೆ ಉಪಯೋಗವಾದರೆ, ಇಡೀ ಸಮಾಜ, ದೇಶಕ್ಕೆ ಒಳ್ಳೆಯದಾದರೆ  ಅದು ಸಾಧನೆ. 

ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ಸಾಧನೆಯನ್ನು ವೈಭವೀಕರಿಸಿದಾಗ ಹೆಚ್ಚಿನ ಜನರಿಗೆ ತಿಳಿಯಬೇಕು. ಎಲ್ಲ ಕಡೆ ಪ್ರಚಾರವಾಗಬೇಕು. ವಿಶೇಷವಾಗಿ ಯುವಜನರಿಗೆ ತಿಳಿಯಬೇಕು. ಸಾಲುಮರದ ತಿಮ್ಮಕ್ಕನ ಬಗ್ಗೆ ಪ್ರಚಾರ ಎಂದರೆ ಹಸಿರು, ಪರಿಸರ, ಶುದ್ದೀಕರಣದ ಪ್ರಚಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
 
ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿ

ಪರಿಸರ ದಿನನಿತ್ಯ ಕಲುಷಿತವಾಗುತ್ತಿದೆ. ನಾವು ಉಸಿರಾಡುವ ಗಾಳಿ, ನೀರು, ಆಹಾರ, ಭೂಮಿ, ಪಂಚಭೂತಗಳು ಕಲುಷಿತಗೊಳ್ಳುವುದು ಕಾಣುತ್ತಿದ್ದೇವೆ. ಒಂದು ಸಮೀಕ್ಷೆಯ ಪ್ರಕಾರ 2000 ಇಸವಿಯವರೆಗೆ ಆಗಿದ್ದ ಪರಿಸರ ಹಾನಿ ಈ 20 ವರ್ಷಗಳಲ್ಲಿ ಆಗಿದೆ.  ಅಷ್ಟು ವೇಗದಲ್ಲಿ ಪರಿಸರ ನಾಶವಾಗುತ್ತಿದೆ. ಮಣ್ಣಿನ ಮೇಲ್ಪದರ ಸೃಷ್ಟಿಯಾಗಲು 200 ವರ್ಷಗಳು ಬೇಕು. ಅದನ್ನು ನಾವು ನಾಶಮಾಡುತ್ತಿದ್ದೇವೆ.  ಮನುಷ್ಯನ ಅವಶ್ಯಕತೆ ಗೆ ನಿಸರ್ಗ ಎಲ್ಲವನ್ನೂ ನೀಡುತ್ತದೆ, ದುರಾಸೆಗಲ್ಲ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದಾರೆ.  ಲೋಹದ ಮೋಹ, ಬೇಕು ಎನ್ನುವ ವ್ಯಾಮೋಹ ಇಷ್ಟೆಲ್ಲಾ ಪರಿಸರ ಹಾನಿಗೆ ಕಾರಣ. ಪ್ರತಿಯೊಬ್ಬ ಮನುಷ್ಯ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಅರ್ಥಮಾಡಿಕೊಳ್ಳಬೇಕು. ಇಂದು ಪರಿಸರ ನಾಶ ಮಾಡಿದರೆ ಮುಂದಿನ ಪೀಳಿಗೆಯ ಆಸ್ತಿಯನ್ನು ಕಳ್ಳತನ ಮಾಡಿದಂತೆ ಎಂದರು. 

ನಿಸರ್ಗದೊಂದಿಗೆ ಮನುಷ್ಯ ಬದುಕಬೇಕು ಸಾಲುಮರದ ತಿಮ್ಮಕ್ಕ ತಮಗೆ ಬಂದ  ಬಳುವಳಿಯನ್ನು ಶ್ರೀಮಂತ ಗೊಳಿಸಿ, ಮೌಲ್ಯವರ್ಧನೆ ಮಾಡಿದ್ದಾರೆ. ಅವರಿಗೆ ಅತ್ಯುನ್ನತ ಪ್ರಶಸ್ತಿಗಳು ಸಂದಿವೆ.  ಪ್ರಶಸ್ತಿಗೆ ಇವರಿಂದ ಹಿರಿಮೆ ಬಂದಿದೆ. ತಿಮ್ಮಕ್ಕನ ಕಾರ್ಯದಿಂದ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ಯಾಗಿದೆ. ಅವರ ಸೇವೆಯನ್ನು ಸದಾ ಕಾಲ ನೆನಪಿಸುತ್ತೇವೆ. ನಮ್ಮ ಸರ್ಕಾರ ಪ್ರಥಮ ಬಾರಿಗೆ ಪರಿಸರ ಆಯವ್ಯಯ ವನ್ನು ಘೋಷಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ.  ಪ್ರತಿ ವರ್ಷ ನಷ್ಟವಾಗುವ ಪರಿಸರವನ್ನು ತುಂಬಿಕೊಡಲು ಕಾರ್ಯಕ್ರಮ ರೂಪಿಸಲಾಗುವುದು. ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದೇನೆ ಎಂದರು.  ನಮ್ಮ ನದಿ, ಕಾಡು, ಗುಡ್ಡಗಾಡುಗಳು, ಸಸ್ಯ ಸಂಪತ್ತು ಉಳಿಯಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ನಿಸರ್ಗದ ಜೊತೆ  ಮನುಷ್ಯ ನಡೆಯಬೇಕು. ಅದರ ವಿರುದ್ಧ ಹೋದರೆ ಮಾನವನಿಗೆ ಕಷ್ಟವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News