ರಸ್ತೆ ಗುಂಡಿ ಮುಚ್ಚಲು ವಿಫಲ; ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್ ಹೈಕೋರ್ಟ್ ಗೆ ಹಾಜರು

Update: 2022-06-30 14:57 GMT

ಬೆಂಗಳೂರು, ಜೂ.30: ನಗರದ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಮುಖ್ಯ ಎಂಜಿನಿಯರ್ ಎಂ.ಲೋಕೇಶ್ ಹೈಕೋರ್ಟ್ ಮುಂದೆ ಖುದ್ದು ಹಾಜರಾದರು. ರಸ್ತೆ ಗುಂಡಿಗಳನ್ನು ಮುಚ್ಚದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ನ್ಯಾಯಪೀಠವು ಹೇಳಿದೆ.

ಬೆಂಗಳೂರಿನ ರಸ್ತೆಗಳ ದುಸ್ಥಿತಿ ಕುರಿತು ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ಆಗಿರುವ ಪ್ರಗತಿಯ ಕುರಿತು ಜು.27ರಂದು ಪ್ರಗತಿಯ ವಿವರ ಸಲ್ಲಿಸಬೇಕೆಂದು ಬಿಬಿಎಂಪಿಗೆ ನಿರ್ದೇಶನ ನೀಡಿತು. 

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು, ಬಿಬಿಎಂಪಿ ಆಯುಕ್ತರೇ, ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ? ರಸ್ತೆ ಗುಂಡಿಯಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಈ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. 

ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ವಾರದ ಹಿಂದೇ ಬೆಂಗಳೂರಿಗೆ ಬಂದಾಗ ಬಿಬಿಎಂಪಿ ಹಲವು ರಸ್ತೆಗಳನ್ನು ಸರಿಪಡಿಸಿತ್ತು. ಬಳಿಕ ಆ ರಸ್ತೆಗಳು ಹಾಳಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆಯೆಲ್ಲಾ ಅದು ನಿಜವೇ ಎಂದು ಸಿಜೆ ಅವರು ಆಯುಕ್ತರನ್ನು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಪಾಲಿಕೆ ಪರ ವಕೀಲರು, ಪ್ರಧಾನಿ ಮೋದಿ ಅವರು ಬಂದಿದ್ದಾಗ ಬಳಸಿದ ಯಾವುದೇ ರಸ್ತೆಗಳೂ ಹಾಳಾಗಿಲ್ಲ, ಒಳಚರಂಡಿ ಸಮಸ್ಯೆಯಿಂದ ಹದಗೆಟ್ಟಿದ್ದ ರಸ್ತೆಯನ್ನು ಸರಿಪಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್(ಎಆರ್‍ಟಿಎಸ್) ಸಂಸ್ಥೆ ನಡೆಸಿದ ಸರ್ವೇ ಪ್ರಕಾರ 847.56 ಕಿ.ಮೀ ರಸ್ತೆಗುಂಡಿ ಸರಿಪಡಿಸಬೇಕಿದೆ. ಎಆರ್‍ಟಿಎಸ್ ಸಂಸ್ಥೆಗೆ ಪೈಥಾನ್ ಯಂತ್ರ ಬಳಸಿ ನಗರದ 397 ಕಿಲೋಮೀಟರ್ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ 576 ಕಿ.ಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. ಜು.15ರಿಂದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪಾಲಿಕೆ ಪರ ವಕೀಲರು ತಿಳಿಸಿದರು.

ರಸ್ತೆ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವಂತೆ ಸಲಹೆ ನೀಡಿದ ಮುಖ್ಯ ನ್ಯಾಯಮೂರ್ತಿಗಳು, ರಸ್ತೆ ಸರಿಪಡಿಸುವವರೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಕ್ತಾಯಗೊಳಿಸುವುದಿಲ್ಲ ಎಂದು ವಿಚಾರಣೆಯನ್ನು ಜು.27ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರ ಸಲ್ಲಿಸಬೇಕು ಎಂದು ನ್ಯಾಯಪೀಠವು ಆದೇಶಿಸಿತು.

ಜು.15ರಂದು ಟೆಂಡರ್ ಪ್ರಕ್ರಿಯೆ ಪ್ರಾರಂಭ: ಹೇಳಿಕೆ ನೀಡಿದ ಪಾಲಿಕೆ

ಎಆರ್‍ಟಿಎಸ್ ಸಂಸ್ಥೆಗೆ ಪೈಥಾನ್ ಯಂತ್ರ ಬಳಸಿ ನಗರದ 397 ಕಿಲೋಮೀಟರ್ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ 576 ಕಿ.ಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. ಜು.15ರಿಂದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪಾಲಿಕೆ ಪರ ವಕೀಲರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News