ಬ್ರಿಟನ್: ರಾಜಕುಟುಂಬದ ವಾರ್ಷಿಕ ಖರ್ಚುವೆಚ್ಚ 102. 4 ಮಿಲಿಯನ್ ಪೌಂಡ್‌ಗೆ ಏರಿಕೆ

Update: 2022-06-30 15:20 GMT
Photo: PTI

ಲಂಡನ್, ಜೂ.30: ಬ್ರಿಟನ್‌ನ ರಾಜಕುಟುಂಬದ ವಾರ್ಷಿಕ ಖರ್ಚುವೆಚ್ಚ ಮತ್ತು ರಾಜಪ್ರಭುತ್ವದ ನಿರ್ವಹಣೆಯ ವೆಚ್ಚದ ವಿವರವನ್ನು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಕಳೆದ ವರ್ಷ ರಾಜಕುಟುಂಬ 102.4 ಮಿಲಿಯನ್ ಪೌಂಡ್‌ನಷ್ಟು ಖರ್ಚು ಮಾಡಿದ್ದು ಇದು ಸರಕಾರದ ನಿಧಿಗಳಿಂದ ಬರುವ ಲಾಭಾಂಶದ ಆದಾಯವನ್ನು ಮೀರಿಸಿದೆ ಎಂದು ವರದಿ ಹೇಳಿದೆ.

 ಕೋಟ್ಯಾಂತರ ಪೌಂಡ್ ವೆಚ್ಚದಲ್ಲಿ ಬಕಿಂಗ್ಹಾಮ್ ಅರಮನೆಯ ನವೀಕರಣ ನಡೆದಿರುವುದು ವೆಚ್ಚ ಏರಿಕೆಗೆ ಪ್ರಮುಖ ಕಾರಣವಾಗಿದೆ. ಜತೆಗೆ, ಕೋವಿಡ್ ನಿರ್ಬಂಧ ಸಡಿಲಿಕೆಯಾದ ಬಳಿಕ ರಾಜಕುಟುಂಬದವರ ಪ್ರಯಾಣ ವೆಚ್ಚ ಹೆಚ್ಚಿರುವುದೂ ಕಾರಣವಾಗಿದೆ. ರಾಜ ಕುಟುಂಬದವರ ಪ್ರಯಾಣ ವೆಚ್ಚ 1.3 ಮಿಲಿಯನ್ ಪೌಂಡ್‌ನಿಂದ 4.5 ಮಿಲಿಯನ್ ಪೌಂಡ್‌ಗೆ ಏರಿಕೆಯಾಗಿದೆ. ಜತೆಗೆ ರಾಣಿ ಹಾಗೂ ಪ್ರಭುತ್ವದ ಇತರ ಸದಸ್ಯರು ದೇಶದೊಳಗೆ ಹಾಗೂ ವಿದೇಶದಲ್ಲಿ ಸುಮಾರು 2,300 ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೊವರಿನ್ ಗ್ರಾಂಟ್ ವರದಿ ಹೇಳಿದೆ.

 ಸೊವರಿನ್ ಗ್ರಾಂಟ್(ಸರಕಾರದ ಅನುದಾನ)ನಿಂದ ಬರುವ ಆದಾಯಕ್ಕಿಂತ 16.1 ಮಿಲಿಯನ್ ಪೌಂಡ್ ಹೆಚ್ಚುವರಿ ವೆಚ್ಚವಾಗಿದೆ. ರಾಜಪ್ರಭುತ್ವದ ದೈನಂದಿನ ವೆಚ್ಚವಾಗಿ 51.8 ಮಿಲಿಯನ್ ಪೌಂಡ್ ಮೊತ್ತ, ಬಕಿಂಗ್ಹಾಮ್ ಅರಮನೆಯ ನವೀಕರಣಕ್ಕೆ 34.5 ಮಿಲಿಯನ್ ಪೌಂಡ್ ನಿಧಿಯನ್ನು ಒದಗಿಸಲಾಗಿದೆ. ನವೀಕರಣ ಕಾರ್ಯದ ವೆಚ್ಚ 40% ಹೆಚ್ಚಳವಾಗಿದೆ. ರಾಣಿ ಎಲಿಝಬೆತ್ ರಾಣಿ ಪದವಿಗೇರಿದ 70ನೇ ವರ್ಷಾಚರಣೆಗೆ ಬಕಿಂಗ್ಹಾಮ್ ಅರಮನೆಯನ್ನು ತುರ್ತಾಗಿ ದುರಸ್ತಿಗೊಳಿಸಲಾಗಿದೆ.

1760ರ ಒಪ್ಪಂದದಂತೆ ಬ್ರಿಟನ್ ರಾಜಪ್ರಭುತ್ವಕ್ಕೆ ಸೇರಿದ ಕಟ್ಟಡ, ಭೂಮಿ ಮತ್ತಿತರ ಆಸ್ತಿಗಳಿಂದ ಬರುವ ನಿವ್ವಳ ಆದಾಯವನ್ನು ಸರಕಾರದ ಖಜಾನೆಗೆ ಹಸ್ತಾಂತರಿಸಲಾಗುತ್ತದೆ. ಈ ಆದಾಯದ ನಿರ್ದಿಷ್ಟ ಅಂಶ ರಾಜಪ್ರಭುತ್ವಕ್ಕೆ ಸಂದಾಯವಾಗುತ್ತದೆ.

ಸಾಂಕ್ರಾಮಿಕದ ಬಿಕ್ಕಟ್ಟು ಈಗಲೂ ಬ್ರಿಟನ್ ರಾಜಕುಟುಂಬದ ಗಳಿಕೆಯ ಶಕ್ತಿಯನ್ನು ಮೊಟಕುಗೊಳಿಸುತ್ತಿದೆ. ಮುಂದಿನ 2 ವರ್ಷಗಳಲ್ಲಿ ಸಾರ್ವಭೌಮ ಅನುದಾನವು ಸ್ಥಿರಗೊಳ್ಳುವ ನಿರೀಕ್ಷೆಯಿದೆ. ನಿರ್ವಹಣಾ ವೆಚ್ಚದ ಮೇಲಿನ ಹಣದುಬ್ಬರದ ಒತ್ತಡ ಮತ್ತು ಪೂರಕ ಆದಾಯ ವೃದ್ಧಿಸಿಕೊಳ್ಳುವ ನಮ್ಮ ಸಾಮರ್ಥ್ಯವು ಅಲ್ಪಾವಧಿಯಲ್ಲಿ ನಿರ್ಬಂಧಿತವಾಗಬಹುದು ಎಂದು ಸರಕಾರದ ಅನುದಾನದ ಲೆಕ್ಕಪತ್ರ ನಿರ್ವಾಹಕ ಮೈಕೆಲ್ ಸ್ಟೀವನ್ಸ್‌ರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News