ಪ್ರತಿಕೂಲ ಹವಾಮಾನ; ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯದ ಇಂಡಿಗೊ ವಿಮಾನ

Update: 2022-07-01 03:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ದೊರಕದ ಹಿನ್ನೆಲೆಯಲ್ಲಿ ಇಂಡಿಗೊ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ಸಾದ ಘಟನೆ ವರದಿಯಾಗಿದೆ.

ನಿಗದಿತ ವೇಳೆಗಿಂತ 15 ನಿಮಿಷ ತಡವಾಗಿ ಗುರುವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ಬೆಳಿಗ್ಗೆ ನಿಗದಿತ ವೇಳೆಗೆ ಅಂದರೆ 7.10ಕ್ಕೆ ಮಂಗಳೂರು ತಲುಪಿತು. ಆದರೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ ಎಂದು ಇಂಡಿಗೊ ವಕ್ತಾರರು ಹೇಳಿದ್ದಾರೆ.

"ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಿಂದಾಗಿ ವಿಮಾನ ಇಳಿಯಲು ಅನುಮತಿ ಸಿಗಲಿಲ್ಲ. ಆದ್ದರಿಂದ ಕೆಲ ಸಮಯ ಮಂಗಳೂರು ವಿಮಾನ ನಿಲ್ದಾಣದ ಸುತ್ತ ಹಾರಾಡಿ ಬಳಿಕ ಬೆಂಗಳೂರಿಗೆ ವಾಪಸ್ಸಾಯಿತು" ಎಂದು ಹೇಳಿದ್ದಾರೆ. ಸುಮಾರು 30 ನಿಮಿಷ ಮಂಗಳೂರಿನ ಆಗಸದಲ್ಲಿ ವಿಮಾನ ಅಡ್ಡಾಡುತ್ತಿತ್ತು ಎಂದು ಮೂಲಗಳು ಹೇಳಿವೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವಕ್ತಾರರ ಹೇಳಿಕೆಯ ಪ್ರಕಾರ, " 6ಇ 131 ವಿಮಾನ 11.15ರ ಸುಮಾರಿಗೆ ಬೆಂಗಳೂರು ಬಿಟ್ಟಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಸ್ಥಿತಿ ಇತ್ತು" ಎಂದು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎನ್ನುವುದನ್ನು ಇಂಡಿಗೊ ನಿರ್ದಿಷ್ಟವಾಗಿ ಹೇಳಿಲ್ಲ. 6ಇ 131 ವಿಮಾನದ ಮಾರ್ಗ ಬದಲಾಯಿಸಿದ್ದನ್ನು ಮಂಗಳೂರು ವಿಮಾನ ನಿಲ್ದಾಣ ದೃಢಪಡಿಸಿದೆ. ಹೈದರಾಬಾದ್‍ನಿಂದ ಆಗಮಿಸಿದ 6ಇ 7163 ವಿಳಂಬವಾಗಿದೆ. 6ಇ 347 ವಿಮಾನ ಮಂಗಳೂರಿಗೆ 7 ನಿಮಿಷ ತಡವಾಗಿ ಬಂದಿದ್ದು, 25 ನಿಮಿಷ ತಡವಾಗಿ ಬಿಟ್ಟಿದೆ. ಬೆಂಗಳೂರು ಮಾರ್ಗವಾಗಿ ಕೊಲ್ಕತ್ತಾದಿಂದ ಮಂಗಳೂರಿಗೆ ಆಗಮಿಸುವ ವಿಮಾನ 16 ನಿಮಿಷ ತಡವಾಗಿ ಆಗಮಿಸಿದ್ದು, 50 ನಿಮಿಷ ತಡವಾಗಿ ಅಂದರೆ ಮಧ್ಯಾಹ್ನ 12.50ಕ್ಕೆ ಬಿಟ್ಟಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News