ಅನರ್ಹರಿಗೆ PHD ಸೀಟ್ ಮಾರಾಟ: ಕೇಶವ ಕೃಪಾದಲ್ಲಿ ಚರ್ಚೆಯಾಗಿರುವ ಶಂಕೆ, ವಿದ್ಯಾರ್ಥಿಗಳಿಂದ ಆಕ್ರೋಶ

Update: 2022-07-01 04:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.30: ಬೆಂಗಳೂರು ವಿವಿಯ ಕೆಲವೊಂದು ನಿರ್ಧಾರಗಳು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರವಾಗುತ್ತಿಲ್ಲ, ಮಾಜಿ ಕುಲಪತಿ ವೇಣುಗೋಪಾಲ್ ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಕಾರಣದಿಂದಾಗಿ ಕೇಶವ ಕೃಪದಲ್ಲಿ ನಿರ್ಧಾರವಾಗುತ್ತಿವೆ ಎಂದು ಕೆಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

2019ರ ಅಧಿಸೂಚನೆಯಲ್ಲಿ ಅನರ್ಹರಿಗೆ ಪಿಎಚ್‍ಡಿ ಪ್ರವೇಶ ನೀಡಿರುವ ಬಗ್ಗೆಯೂ ಕೇಶವ ಕೃಪದಲ್ಲೇ ನಿರ್ಧಾರವಾಗಿರಬಹುದು. ಪರಿಣಾಮವಾಗಿ ಪ್ರತಿಷ್ಠಿತ ಬೆಂಗಳೂರು ವಿವಿಯ ಪಿಎಚ್‍ಡಿ ಪದವಿಗಳು ಹಣ ಇರುವ ಅನರ್ಹರ ಪಾಲಾಗುತ್ತಿವೆ ಎಂದು ಪಿಎಚ್‍ಡಿ ಆಕಾಂಕ್ಷಿಗಳು ಆರೋಪಿಸಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್‍ಡಿ ಪ್ರವೇಶಾತಿಗೆ 2019ರಲ್ಲಿ ಹೊರಡಿಸಿದ್ದ ಅಧಿಸೂಚನೆಯ ಅನ್ವಯ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಸುಮಾರು 50ಕ್ಕೂ ಹೆಚ್ಚು ಮಂದಿ ಅನರ್ಹರಿಗೆ ಪಿಎಚ್‍ಡಿ ಪ್ರವೇಶವನ್ನು ನೀಡಲಾಗಿದೆ. ಇದನ್ನು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಪ್ರಶ್ನಿಸಿದ್ದು, ಇದುವರೆಗೂ ಅನರ್ಹರಿಗೆ ಪಿಎಚ್‍ಡಿ ಪ್ರವೇಶವನ್ನು ನೀಡಿರುವ ಕುರಿತು ವಿವಿಯು ಸಮರ್ಪಕ ಉತ್ತರವನ್ನು ನೀಡಿಲ್ಲ.

ಬೆಂಗಳೂರು ವಿವಿಯಲ್ಲಿ ಡಾ.ಸಿ.ಶಿವರಾಜು ಎಂಬುವವರು ಮೌಲ್ಯಮಾಪನದ ಕುಲಪತಿಗಳಾಗಿದ್ದಾಗ ಪಿಎಚ್‍ಡಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಅವರ ಅಧಿಕಾರಾವಧಿ ಮುಗಿದ ಬಳಿಕ ಆ ಸ್ಥಾನಕ್ಕೆ ಬಂದ ಪ್ರೊ. ಜೆ.ಟಿ. ದೇವರಾಜು ಅವರು ಅನರ್ಹರಿಗೆ ಪಿಎಚ್‍ಡಿಗೆ ಪ್ರವೇಶವನ್ನು ನೀಡಿದ್ದಾರೆ. ಯುಜಿಸಿಯ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅನರ್ಹರಿಗೆ ಪಿಎಚ್‍ಡಿ ಸೀಟುಗಳನ್ನು ಹಂಚಿಕೆ ಮಾಡಿದ್ದಾರೆ. ಖಾಲಿ ಉಳಿದಿದ್ದ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಪರಿಣಾಮವಾಗಿ ಪ್ರತಿಭಾವಂತರಿಗೆ ಪಿಎಚ್‍ಡಿ ಸೀಟುಗಳನ್ನು ನಿರಾಕರಿಸಿದ್ದಾರೆ. ಅಲ್ಲದೇ ಇನ್ನೂ ಐದು ವರ್ಷಗಳು ಬೆಂಗಳೂರು ವಿವಿಯಲ್ಲಿ ಪಿಎಚ್‍ಡಿ ಪ್ರವೇಶಾತಿಗೆ ಅಧಿಸೂಚನೆಯನ್ನು ಪ್ರಕಟಿಸದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ರಾಜ್ಯಪಾಲರು ಪಿಎಚ್‍ಡಿ ಪ್ರವೇಶಾತಿಗಾಗಿ 2016 ಯುಜಿಸಿ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುಮೋದನೆ ನೀಡಿದ್ದರು. ಇದರ ಅನ್ವಯ ಯುಜಿಸಿ ನೀಡಿದ್ದ ನಿರ್ದೇಶನಗಳಂತೆ ಪಿಎಚ್‍ಡಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆದರೆ ಒಂದೇ ಅಧಿಸೂಚನೆಗೆ ಮೂರು ವರ್ಷಗಳಿಂದ ಪ್ರವೇಶ ಪ್ರಕ್ರಿಯೆಯನ್ನು ನಡೆಸಿದ ಕಾರಣ ಅನರ್ಹರು ಪಿಎಚ್‍ಡಿ ಸೀಟ್ ಖರೀದಿಸಿದ್ದಾರೆ ಎಂಬ ದೂರು ಕೇಳಿಬರುತ್ತಿದೆ.  

ಅಂಗವಿಕಲನಿಗೆ ನಿರಾಕರಣೆ: ಅರ್ಥಶಾಸ್ತ್ರ ವಿಭಾಗದಲ್ಲಿ ಶಿವಣ್ಣ ಎಂಬುವವರು ಪಿಎಚ್‍ಡಿ ಆಕಾಂಕ್ಷಿಯಾಗಿದ್ದು, 2021ರ ಜುಲೈನಲ್ಲಿ ಅವರು ಪಿಎಚ್‍ಡಿ ಪ್ರವೇಶದ ಎರಡನೆ ಸುತ್ತಿನ ಕೌನ್ಸಿಲಿಂಗ್‍ಗೆ ಹಾಜರಾಗಿದ್ದರು. ಅವರ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲನೆ ನಡೆಸಲಾಗಿತ್ತು. ಮಾರ್ಗದರ್ಶಕರನ್ನು ನಿಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯು ಮುಗಿದಿದೆ ಎಂದು ಹಿಂದಕ್ಕೆ ಕಳುಹಿಸಿದರು ಎಂದು ಶಿವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


ಬೆಂಗಳೂರು ವಿವಿಯಲ್ಲಿ 2019ರ ಪಿಎಚ್‍ಡಿ ಅಧಿಸೂಚನೆಯ ಪ್ರವೇಶಾತಿಯಲ್ಲಿ ಅಕ್ರಮ ನಡೆದಿರುವುದು ಜಗಜ್ಜಾಹೀರಾಗಿದೆ. ಅರ್ಥಶಾಸ್ತ್ರ ವಿಭಾಗದಲ್ಲಿ ಖಾಲಿ ಇರುವ ಪಿಎಚ್‍ಡಿ ಸೀಟನ್ನು ಕಾನೂನುಬದ್ಧವಾಗಿ ನೀಡುವಂತೆ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಅವರು ವಿವಿಯ ಮೌಲ್ಯಮಾಪನ ಕುಲಸಚಿವರನ್ನು ಮನವಿ ಮಾಡುವಂತೆ ಹೇಳಿದರು. ಅವರನ್ನೂ ಭೇಟಿ ಮಾಡಿದೆ. ಅವರು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡುವಂತೆ ಹೇಳಿದರು. ಅವರನ್ನು ಭೇಟಿ ಮಾಡಿದರೆ, ಅವರು ಕುಲಪತಿಗಳನ್ನು ಭೇಟಿ ಮಾಡುವುದಕ್ಕೆ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿ ವಿಫಲನಾಗಿ, ಕೊನೆಗೆ ಬೆಂಗಳೂರು ವಿವಿಗೆ ಪತ್ರ ಬರೆದಿದ್ದೇನೆ. ಅಂಗವಿಕಲನೆಂದು ಬೆಂಗಳೂರು ವಿವಿ ಅದನ್ನು ನಿರಾಕರಿಸಿದೆ. 

-ಶಿವಣ್ಣ, ಪಿಎಚ್‍ಡಿ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News