ಉದಯಪುರ ಹಂತಕರಿಗೂ ಪಕ್ಷಕ್ಕೂ ಸಂಬಂಧವಿಲ್ಲ: ಕಾಂಗ್ರೆಸ್ ಆರೋಪದ ನಂತರ ಬಿಜೆಪಿ ಸ್ಪಷ್ಟೀಕರಣ

Update: 2022-07-02 08:52 GMT

 ಜೈಪುರ್: ರಾಜಸ್ಥಾನದ ಉದಯಪುರ್‍ನಲ್ಲಿ ಟೈಲರ್ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬಾತನಿಗೆ ಬಿಜೆಪಿ ಜೊತೆಗೆ ನಂಟಿದೆ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್ ಗಳನ್ನು ಕೈಗೆತ್ತಿಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬಿಜೆಪಿ ತನಗೂ ಆರೋಪಿಗಳು ಸಂಬಂಧವಿಲ್ಲ ಎಂದು ಹೇಳಿದೆ.

"ಇಬ್ಬರು ಆರೋಪಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ" ಎಂದು ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದಿಖ್ ಖಾನ್ ಸ್ಪಷ್ಟಪಡಿಸಿದ್ದಾರಲ್ಲದೇ ರಾಜಸ್ಥಾನದ ಕಾಂಗ್ರೆಸ್ ಸರಕಾರದ ವೈಫಲ್ಯದಿಂದಾಗಿ ಈ ಹತ್ಯೆ ನಡೆದಿದೆ ಎಂದು ಹೇಳಿದ್ದಾರೆ.

ಆದರೆ ಹತ್ಯೆ ಆರೋಪಿಗಳ ಪೈಕಿ ಒಬ್ಬಾತ ʼಬಿಜೆಪಿ ಸದಸ್ಯ' ಎಂದು ಕಾಂಗ್ರೆಸ್ ಆರೋಪಿದ್ದು ಈ ವಿಚಾರವನ್ನು ಮುಚ್ಚಿ ಹಾಕಲೆಂದೇ ಕೇಂದ್ರ ಸರಕಾರ ತ್ವರಿತವಾಗಿ ಈ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿತ್ತೇ ಎಂದು ಪ್ರಶ್ನಿಸಿದೆ.

ಆರೋಪಿ ರಿಯಾಝ್ ಅತ್ತಾರಿಯ ಬಿಜೆಪಿ ನಂಟಿನ ಕುರಿತು ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ "ಕನ್ಹಯ್ಯಾ ಲಾಲ್ ಹಂತಕ ರಿಯಾಝ್ ಅತ್ತಾರಿ ಒಬ್ಬ ಬಿಜೆಪಿ ಸದಸ್ಯ" ಎಂದು ಟ್ವೀಟ್ ಮಾಡಿದ್ದರೆ ಇನ್ನೂ ಹಲವು ನಾಯಕರು ಇದೇ ಅರ್ಥ ನೀಡುವ ಟ್ವೀಟ್ ಮಾಡಿದ್ದಾರೆ.

ಇವುಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಲವಿಯ ಅವುಗಳು ಸುಳ್ಳು ಸುದ್ದಿ ಎಂದಿದ್ದಾರೆ.

"ನೀವು ಸುಳ್ಳು ಸುದ್ದಿ ಹರಡುತ್ತಿರುವುದು ನನಗೆ ಆಶ್ಚರ್ಯ ತಂದಿಲ್ಲ. ಉದಯಪುರ್ ಹಂತಕರು ಬಿಜೆಪಿ ಸದಸ್ಯರಾಗಿರಲಿಲ್ಲ. ರಾಜೀವ್ ಗಾಂಧಿಯನ್ನು ಕೊಲ್ಲಲು ಎಲ್‍ಟಿಟಿಇ ಗೆ ಸೇರಿದವರು ಕಾಂಗ್ರೆಸ್ ಪಕ್ಷಕ್ಕೆ ನುಸುಳಲು ಯತ್ನಿಸಿದಂತೆ ಅವರು ಬಿಜೆಪಿ ನುಸುಳಲು ಯತ್ನಿಸಿದ್ದರು" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News