ನಮ್ಮ ದೇಶದಲ್ಲಿ ಮಾತೇ ಜಾಸ್ತಿ, ಕೆಲಸ ಕಡಿಮೆ: ಪ್ರಧಾನಿ ಮೋದಿ ವಿರುದ್ದ ಕೆಸಿಆರ್ ವಾಗ್ದಾಳಿ

Update: 2022-07-02 10:02 GMT
Photo:PTI

ಹೈದರಾಬಾದ್: ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ  ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯು ತಮಾಷೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವ್ಯಂಗ್ಯವಾಡಿದ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್, ಚೀನಾದಲ್ಲಿ ಕಡಿಮೆ ಮಾತು ಹಾಗೂ  ಹೆಚ್ಚು ಕೆಲಸ ನಡೆಯುತ್ತದೆ. ಅದರ ಪರಿಣಾಮವಾಗಿ  ಅಲ್ಲಿ ಆರ್ಥಿಕತೆ ವೇಗವಾಗಿದೆ. ನಮ್ಮ ದೇಶದಲ್ಲಿ  ಎಲ್ಲರೂ ಮಾತನಾಡುತ್ತಾರೆ. ಆದರೆಯಾರೂ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಯಾವುದೇ ಫಲಿತಾಂಶ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಮೇಕ್ ಇನ್ ಇಂಡಿಯಾ ಎಂಬುದು ದೊಡ್ಡ ಸುಳ್ಳು, ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಹಾಗೂ  ಕಾರ್ಮಿಕರು ರಸ್ತೆಯಲ್ಲಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದರು.

ತೆಲಂಗಾಣ ರಾಜಧಾನಿ ಹೈದರಾಬಾದ್ ಇಂದು ಎರಡು ಬೃಹತ್ ಶಕ್ತಿ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದು, ಬಿಜೆಪಿ ತನ್ನ ಎರಡು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಗರದಲ್ಲಿ ನಡೆಸುತ್ತಿದ್ದು, ಇದರಲ್ಲಿ ಭಾಗವಹಿಸಲು  ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.  ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿ ರ್ಯಾಲಿಯನ್ನು ಆಯೋಜಿಸಿದೆ.

ಯಶವಂತ್ ಸಿನ್ಹಾ ಅವರನ್ನು ಟಿಆರ್‌ಎಸ್ ಅಧ್ಯಕ್ಷ ಹಾಗೂ  ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಟಿಆರ್‌ಎಸ್ ಕಾರ್ಯಕರ್ತರು ವಿಮಾನ ನಿಲ್ದಾಣದಿಂದ ಜಲ ವಿಹಾರದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಅಲ್ಲಿ ಸಿನ್ಹಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯಮಂತ್ರಿ  ಕೆಸಿಆರ್,  ಯಶವಂತ್ ಸಿನ್ಹಾ ಪರ ಬ್ಯಾಟಿಂಗ್ ಮಾಡಿದರು ಹಾಗೂ  ಭಾರತದ ರಾಜಕೀಯದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಲು ಅಧ್ಯಕ್ಷೀಯ ಚುನಾವಣೆಯಲ್ಲಿ  ಸಿನ್ಹಾರನ್ನು ಬೆಂಬಲಿಸುವಂತೆ ಸಂಸದರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News