ಪಾಕಿಸ್ತಾನ: ಹಿರಿಯ ಪತ್ರಕರ್ತ ಅಯಾಝ್ ಅಮೀರ್ ಮೇಲೆ ಹಲ್ಲೆ

Update: 2022-07-02 15:47 GMT

ಇಸ್ಲಮಾಬಾದ್, ಜು.2: ಸೇನೆಯನ್ನು ಟೀಕಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತ ಅಯಾಝ್ ಅಮೀರ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಲಾಹೋರ್ ನ ಖಾಸಗಿ ಟಿವಿ ವಾಹಿನಿಯ ಕಚೇರಿಯಿಂದ ಹೊರಬರುತ್ತಿದ್ದ ಅಮೀರ್ ಮೇಲೆ 6 ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದು ಅವರ ಬಟ್ಟೆಯನ್ನು ಹರಿದುಹಾಕಿ ಥಳಿಸಿದೆ.

 
ಅವರ ಕೈಯಲ್ಲಿದ್ದ ಮೊಬೈಲ್ ಫೋನ್ ಮತ್ತು ವ್ಯಾಲೆಟ್ ಅನ್ನು ಕಿತ್ತುಕೊಂಡ ಹಲ್ಲೆಕೋರರು ಜನರು ಒಟ್ಟುಸೇರುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಅಮೀರ್ ಮುಖಕ್ಕೆ ಗಾಯವಾಗಿದೆ ಎಂದು ವರದಿಯಾಗಿದೆ. ತನಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ, ಯಾರೊಂದಿಗೂ ಜಗಳವನ್ನೂ ಆಡಿಲ್ಲ.
 
ನನ್ನ ಮೇಲೆ ದಾಳಿ ಮಾಡಿದವರು ನನ್ನ ಪ್ರಾಯವನ್ನಾದರೂ ಗಮನಿಸಬೇಕಿತ್ತು. ತನ್ನಂತಹ ವ್ಯಕ್ತಿಗಳೇ ಸುರಕ್ಷಿತರಾಗಿಲ್ಲ ಎಂದಾದರೆ ಜನಸಾಮಾನ್ಯರ ಪಾಡೇನು? ಈ ದೇಶದಲ್ಲಿ ಜಂಗಲ್ರಾಜ್ ವ್ಯವಸ್ಥೆಯಿದೆಯೇ ? ಎಂದು ಅಮೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಗುರುವಾರ ಇಸ್ಲಮಾಬಾದ್ನಲ್ಲಿ ನಡೆದಿದ್ದ ‘ಆಡಳಿತ ಬದಲಾವಣೆ ಮತ್ತು ಪಾಕಿಸ್ತಾನದ ಮೇಲೆ ಅದರ ಪ್ರಭಾವ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಅಮೀರ್, ದೇಶದ ರಾಜಕೀಯದಲ್ಲಿ ಭಾಗವಹಿಸುವ ಪ್ರಬಲ ಸೇನಾಪಡೆಯನ್ನು ಟೀಕಿಸಿದ್ದರು.
 
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೇನೆಯ ಜನರಲ್ಗಳನ್ನು ‘ಆಸ್ತಿ ವ್ಯಾಪಾರಿಗಳು’ ಎಂದು ಉಲ್ಲೇಖಿಸಿದ್ದ ಅಮೀರ್, ಜಿನ್ನಾ ಹಾಗೂ ಅಲ್ಲಾಮ ಇಕ್ಬಾಲ್ ಅವರ ಪ್ರತಿಮೆಗಳನ್ನು ತೆರವುಗೊಳಿಸಿ ಈ ಆಸ್ತಿ ವ್ಯಾಪಾರಿಗಳ ಪ್ರತಿಮೆ ಸ್ಥಾಪಿಸಬೇಕು ಎಂದು ಟೀಕಿಸಿದ್ದರು. ಹಲ್ಲೆಯನ್ನು ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಮತ್ತು ಪಂಜಾಬ್ ಮುಖ್ಯಮಂತ್ರಿ ಹಮ್ಝಾ ಶಹಬಾಝ್ ಖಂಡಿಸಿದ್ದಾರೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪ್ರಧಾನಿ ಆದೇಶಿಸಿದ್ದಾರೆ. ಪತ್ರಕರ್ತರ ಮೇಲಿನ ಹಲ್ಲೆ ಖಂಡನೀಯವಾಗಿದೆ. ಸರಕಾರ ನೈತಿಕ ಅಧಿಕಾರ ಕಳೆದುಕೊಂಡಾಗ ಹಿಂಸೆ, ದೌರ್ಜನ್ಯದ ಮಾರ್ಗ ಅನುಸರಿಸುತ್ತದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News