ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಓರ್ವ ನೀರು ಪಾಲು

Update: 2022-07-03 18:25 GMT

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಿಸಿದರೆ ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ‌ ರವಿವಾರ ಸಂಜೆ ನಡೆದಿದೆ. 

ರುಕ್ಮಯ ಸಪಲ್ಯ ಎಂಬವರ ಪುತ್ರ ಅಶ್ವಿತ್ (19) ಎಂಬಾತ ನೀರು ಪಾಲಾಗಿ ನಾಪತ್ತೆಯಾಗಿದ್ದಾ‌ನೆ. ಸಜೀಪಪಡು ಪೆರ್ವ ನಿವಾಸಿ ಹರ್ಷಿತ್ ಎಂಬ  ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದು ಅಸ್ವಸ್ಥಗೊಂಡಿದ್ದ ಆತನನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಶಾಲ್, ವಿಕೇಶ್, ಲಿಖಿತ್ ಎಂಬವರು ಸುರಕ್ಷಿತವಾಗಿ ದಡ ಸೇರಿದ್ದಾರೆ.

ತಲೆಮೊಗರು ನಿವಾಸಿ ನಾಗೇಶ್ ಸಪಲ್ಯ ಎಂಬವರ ಮನೆಯಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮ ಮುಗಿದ ಬಳಿಕ ನಾಗೇಶ್ ಅವರ ಅಣ್ಣ ರುಕ್ಮಯ ಸಪಲ್ಯ ಅವರ ಪುತ್ರ ಅಶ್ವಿಥ್ ಮತ್ತು ಸಂಬಂಧಿಗಳ ಮಕ್ಕಳಾದ  ಹರ್ಷಿತ್, ಲಿಖಿತ್, ವಿಕೇಶ್ ಮತ್ತು ವಿಶಾಲ್ ಒಟ್ಟು ಐವರು ಜತೆಯಾಗಿ ನೇತ್ರಾವತಿ ನದಿಗೆ ತೆರಳಲಿ ಈಜಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. 

ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿ ನಾಪತ್ತೆಯಾದ ಅಶ್ವಿಥ್ ಗಾಗಿ ಹುಡುಕಾಟ ನಡೆದಿದ್ದು ರಾತ್ರಿಯಾದರೂ ಆತ ಪತ್ತೆಯಾಗಿಲ್ಲ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಹುಡುಕಾಟಕ್ಕೆ ಅಡಚಣೆಯಾಗಿದೆ. 

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಸ್ಥಳೀಯ ಶಾಸಕ ಯು.ಟಿ.ಖಾದರ್, ನಾಪತ್ತೆಯಾದ ಬಾಲಕನ ಹುಡುಕಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್ ಗೆ ಸೂಚಿಸಿದ್ದು ಸಜಿಪಪಡು ಸಮೀಪದ ಪಾವೂರು, ಹರೇಕಳ, ಅಂಬ್ಲಮೊಗರು, ಉಳಿಯ, ಉಳ್ಳಾಲ ಭಾಗದಲ್ಲಿ ಪತ್ತೆ ಕಾರ್ಯ ನಡೆಸುವಂತೆ ಸೂಚಿಸಿದ್ದಾರೆ. ಅಲ್ಲದೆ ನೀರುಪಾಲಾದ ಹರ್ಷ ನನ್ನು ಸ್ಥಳೀಯರಾದ ಫಾರಿಶ್, ಅನ್ವರ್, ಝುಭೈರ್ ಮತ್ತು ಶರತ್ ಎಂಬವರು ಸೇರಿ ರಕ್ಷಿಸಿದ್ದು ಶಾಸಕ ಯು.ಟಿ.ಖಾದರ್ ರಕ್ಷಿಸಿದ ಯುವಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News