ಬೆಸ್ಟೊ ಶತಕದ ಹೊರತಾಗಿಯೂ ಭಾರತದ ಹಿಡಿತದಲ್ಲಿ ಟೆಸ್ಟ್

Update: 2022-07-04 02:12 GMT
Photo: Twitter/@BCCI

ಬರ್ಮಿಂಗ್‍ಹ್ಯಾಮ್: ಜಾನಿ ಬೆಸ್ಟೊ ಅವರ ಶತಕ (140 ಎಸೆತಗಳಲ್ಲಿ 106) ಹೊರತಾಗಿಯೂ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತದ 416 ರನ್‍ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ 284 ರನ್‍ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್ ಆರಂಭದಲ್ಲಿ ಬೂಮ್ರಾ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರೆ, ನಂತರ ವೇಗಿ ಮುಹಮ್ಮದ್ ಸಿರಾಜ್ ಎದುರಾಳಿಗಳಿಗೆ ಸಿಂಹಸ್ವಪ್ನ ಎನಿಸಿದರು.

66 ರನ್‍ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ ಸಿರಾಜ್ ಯಶಸ್ವಿ ಬೌಲರ್ ಎನಿಸಿದರು. ಬೂಮ್ರಾ  (3), ಶಮಿ (2) ಹಾಗೂ ಶಾರ್ದೂಲ್ ಠಾಕೂರ್ (1) ಉತ್ತಮ ಸಾಥ್ ನೀಡಿದರು. ಇಂಗ್ಲೆಂಡ್ ಪರ ಜಾನಿ ಬ್ರೆಸ್ಟೊ ಮಾತ್ರ ಭಾರತದ ಸಂಘಟಿತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಆಕರ್ಷಕ ಶತಕ ಸಿಡಿಸಿದರು.

ಎರಡನೇ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ (ನಾಟೌಟ್ 50) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಮೂರನೇ ದಿನದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿರುವ ಭಾರತ ಒಟ್ಟಾರೆ 257 ರನ್‍ಗಳ ಮುನ್ನಡೆಯಲ್ಲಿದೆ.

ಶುಭಮನ್ ಗಿಲ್ ಎರಡನೇ ಇನಿಂಗ್ಸ್ ನಲ್ಲೂ ಅಗ್ಗದ ಮೊತ್ತ (4)ಕ್ಕೆ ಔಟ್ ಆದರೆ ಹನುಮ ವಿಹಾರಿ (11) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (20) ಕೂಡಾ ಹೆಚ್ಚಿನ ಪ್ರತಿರೋಧ ತೋರಲಿಲ್ಲ. ರಿಷಭ್ ಪಂತ್ 46 ಎಸೆತಗಳಲ್ಲಿ 30 ರನ್ ಸಿಡಿಸಿ ಪೂಜಾರ ಜತೆ ಇನಿಂಗ್ಸ್ ಕಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News