ಶಾಸಕ ಝಮೀರ್‌ ಅಹ್ಮದ್‌ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

Update: 2022-07-06 04:34 GMT

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಶಾಸಕ ಝಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಮಂಗಳವಾರ ಬೆಳಗ್ಗೆ ದಾಳಿ ಮಾಡಿ, ಶೋಧ ನಡೆಸುತ್ತಿದೆ.

ತನಿಖೆಯ ಭಾಗವಾಗಿ ನಗರದ ಐದು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಸಮೀಪ ಇರುವ ಝಮೀರ್‌ ಅವರ ಮನೆ, ಸಿಲ್ವರ್‌ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್‌ ಟ್ರಾವೆಲ್ಸ್‌ ಕಚೇರಿಯಲ್ಲಿ ಶೋಧ ನಡೆಯುತ್ತಿದೆ.

ಈ ಹಿಂದೆ 2021ರ ಆಗಸ್ಟ್‌ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಝಮೀರ್‌ ಅಹಮ್ಮದ್‌ ಅವರ ಮನೆ, ಕಚೇರಿಗಳ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು. ಬಳಿಕ ಅಕ್ಟೋಬರ್‌ನಲ್ಲಿ ನೋಟಿಸ್‌ ಜಾರಿಮಾಡಿದ್ದ ತನಿಖಾ ಸಂಸ್ಥೆ, ದೆಹಲಿಗೆ ಕರೆಸಿಕೊಂಡು ವಿಚಾರಣೆಯನ್ನೂ ನಡೆಸಿತ್ತು.

ಸದ್ಯ 40ಕ್ಕೂ ಹೆಚ್ಚು ಅಧಿಕಾರಿಗಳು ಏಕ ಕಾಲದಲ್ಲಿ ಶಾಸಕರ ಕಚೇರಿ, ಮನೆ ಸೇರಿದಂತೆ ಕೆಲವೆಡೆ ಶೋಧ ನಡೆಸುತ್ತಿದ್ದು, ಶಾಸಕರ ನಿವಾಸದ ಬಳಿ ಭದ್ರತೆಗಾಗಿ ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ. 

ಜೀವಂತ ಗುಂಡು ಪತ್ತೆ! 

ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ನಲ್ಲಿ ಎಸಿಬಿ ಶೋಧ ನಡೆಸಿದಾಗ 24 ಗುಂಡುಗಳು ಪತ್ತೆಯಾಗಿದ್ದು, ಅದರಲ್ಲಿ ಒಂದು ಗುಂಡು ಖಾಲಿಯಾಗಿ ದೊರೆತಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News