PSI ಹಗರಣ | ಮಾಜಿ ಸಿಎಂ ಪುತ್ರ ವಿಜಯೇಂದ್ರ, ಅಶ್ವತ್ಥನಾರಾಯಣ ಮೇಲೂ ಆರೋಪವಿದೆ: ಸಿದ್ದರಾಮಯ್ಯ

Update: 2022-07-05 08:58 GMT

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಸಂಬಂಧ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಚಿವ ಅಶ್ವತ್ಥನಾರಾಯಣ ವಿರುದ್ಧವೂ ಆರೋಪ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  'ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ  ಇನ್ನೂ ಬಹಳ ಜನರು ಇದ್ದಾರೆ. ಸಚಿವ ಅಶ್ವತ್ಥನಾರಾಯಣ್, ಅಧಿಕಾರಿಗಳೂ ಇದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರ ಕಾಲ, ಇವರ ಕಾಲ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಇವರಿಗೆಲ್ಲ ರಕ್ಷಣೆ ನೀಡುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

ನಾವು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಬಾರಿ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಮಾರ್ಚ್‌ ತಿಂಗಳಲ್ಲಿ ತನಿಖೆಗೆ ಒತ್ತಾಯ ಮಾಡಿದ್ದರೆ, ಸರ್ಕಾರ ಏಪ್ರಿಲ್‌ ನಲ್ಲಿ ಸಿಐಡಿ ತನಿಖೆ ಆರಂಭ ಮಾಡಿಸಿತು. ಸಿಐಡಿ ಇಂದ ನ್ಯಾಯ ಸಿಗಲ್ಲ, ಇದರಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳ ಪಾತ್ರ ಇರುವುದರಿಂದ ಸಿಐಡಿ ಅವರನ್ನೆಲ್ಲ ವಿಚಾರಣೆ ಮಾಡಿ ಬಂಧಿಸುವುದು ಕಷ್ಟದ ಕೆಲಸ ಹಾಗಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಹಲವು ಬಾರಿ ಒತ್ತಾಯ ಮಾಡಿದ್ದೆ. ಹೈಕೋರ್ಟ್‌ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು 2022 ಮೇ 26 ರಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ.

ಇದೇ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನ ಆಗಿದೆ. ನಾವು ವಿಧಾನಸಭೆಯಲ್ಲಿ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದಾಗ ಸಿಎಂ ಹಾಗೂ ಗೃಹ ಸಚಿವರು ನಮ್ಮ ಮೈಮೇಲೆ ಬಿದ್ದರು. ಪಿಎಸ್ ಐ ಹಗರಣದಲ್ಲಿ ಯಾವ ಭ್ರಷ್ಟಾಚಾರ ನಡೆದಿಲ್ಲ ಎಂದು ಸದನದಲ್ಲಿ ಹೇಳಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ವೀರಾವೇಶದಲ್ಲಿ ಉತ್ತರ ಕೊಟ್ಟಿದ್ದರು.ಇವಾಗ ಅದೇ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಅಮೃತ್ ಪೌಲ್ ಬಂಧನ ಆಗಿದೆ. ಇವಾಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಸರ್ಕಾರದ ನಿರ್ದೇಶನ ಇಲ್ಲದೆ ಎಡಿಜಿಪಿ ಅವರು ಓಎಮ್‌ಆರ್‌ ಶೀಟ್‌ ಅನ್ನು ಇಷ್ಟು ರಾಜಾರೋಷವಾಗಿ ತಿದ್ದುಪಡಿ ಮಾಡಲು ಸಾಧ್ಯವೇ? ಕೋಟ್ಯಂತರ ರೂಪಾಯಿ ಲಂಚ ಪಡೆಯಲು ಸಾಧ್ಯವೇ? ನ್ಯಾಯಯುತವಾಗಿ ಪರೀಕ್ಷೆ ಬರೆದು, ಆಯ್ಕೆಯಾದವರು ಇಂದು ಕಣ್ಣೀರು ಹಾಕುತ್ತಿದ್ದಾರೆ. ಈ ಹಿಂದೆ ನಡೆದಿರುವ ಎಫ್‌ಡಿಎ, ತೋಟಗಾರಿಕೆ, ಪಶು ಸಂಗೋಪನೆ, ಲೋಕೋಪಯೋಗಿ ಹಾಗೂ ಅಸಿಸ್ಟಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನೂ ಒಳಗೊಂಡು ತನಿಖೆಯಾಗಬೇಕು. ಗೃಹ ಸಚಿವರನ್ನು ತಕ್ಷಣ ವಜಾ ಮಾಡಬೇಕು ಹಾಗೂ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News