ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ; 50ನೆ ದಿನದ ಪ್ರದರ್ಶನದ ಆದಾಯ ಅಶಕ್ತ ಕಲಾವಿದರಿಗೆ

Update: 2022-07-05 12:09 GMT

ಮಂಗಳೂರು, ಜು.೫:  ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್‌ನಲ್ಲಿ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾಕ್ಕೆ ಕರಾವಳಿಯಾದ್ಯಂತ ಪ್ರೇಕ್ಷಕರಿಂದ ಅಭೂತಪೂರ್ವ  ಪ್ರತಿಕ್ರಿಯೆ ಲಭಿಸಿದೆ. ಜು.8ರಂದು 14 ಚಿತ್ರಮಂದಿರಗಳಲ್ಲಿ ಸಿನೆಮಾ 50 ದಿನಗಳನ್ನು ಪೂರೈಸುತ್ತಿದ್ದು, ಅಂದು  ಪ್ರದರ್ಶನದಿಂದ ದೊರೆತ ಎಲ್ಲ ಆದಾಯವನ್ನು ಅಶಕ್ತ ಕಲಾವಿದರಿಗೆ ನೀಡಲಾಗುವುದು ಎಂದು ಚಿತ್ರದ ನಿರ್ಮಾಪಕ ಆನಂದ್ ಎನ್. ಕುಂಪಲ ತಿಳಿಸಿದರು.

ರಾಜ್ ಸೌಂಡ್ಸ್ ಆ್ಯಂಡ್ ಲೈಟ್ ಸಿನೆಮಾವನ್ನು ಇದುವರೆಗೆ  ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದ್ದಾರೆ. 7 ನೇ ವಾರದವರೆಗೂ ಸಿನಿಮಾ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಶುಕ್ರವಾರದಿಂದ ಸೌದಿ ಅರೇಬಿಯಾದ  ಬೇರೆ ಬೇರೆ ಸ್ಥಳಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ. ಸಿನೆಮಾಕ್ಕೆ ಒಂದೂವರೆ ಕೋಟಿ ರೂ. ಖರ್ಚಾಗಿದ್ದು, ಹಾಕಿದ ಬಂಡವಾಳ ವಾಪಸ್ ಬಂದಿದೆ. ಸಿನಿಮಾಸಕ್ತರು ೫೦ನೇ ದಿನದ ಪ್ರದರ್ಶನದಲ್ಲಿ ಪಾಲ್ಗೊಂಡು ಅಶಕ್ತ ಕಲಾವಿದರಿಗೆ ನೆರವಾಗಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಿನಂತಿಸಿದರು.

ನಟ ವಿನೀತ್‌ ಕುಮಾರ್ ಮಾತನಾಡಿ, ಮುಂಬೈನಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ ಸಿನೆಮಾದ ಎಲ್ಲ ಪ್ರದರ್ಶನಗಳು ಹೌಸ್‌ಫುಲ್ ಆಗಿವೆ. ಇನ್ನೂ 15 ರಿಂದ 20 ಪ್ರದರ್ಶನಗಳಿಗೆ ಬೇಡಿಕೆ ಇದೆ. ಸಿನಿಮಾದ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದಾರೆ. ಇದು ಟೀಂ ವರ್ಕ್‌ನಿಂದಾಗಿ ಸಾಧ್ಯವಾಯಿತು. ಇದೇ ತಂಡದಿಂದ ಇನ್ನೊಂದು ಹೊಸ ಸಿನಿಮಾ ತಯಾರಾಗಲಿದೆ. ಆ ಸಿನಿಮಾದ ಸುದ್ದಿಯನ್ನು ಶೀಘ್ರದಲ್ಲೆ ತಿಳಿಸಲಾಗುವುದು ಎಂದರು.

ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ,  ಭಾರತ್ ಮಾಲ್ ನ ಬಿಗ್ ಸಿನಿಮಾಸ್, ಪಿವಿಆರ್ ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ, ಪ್ಲಾನೆಟ್, ರಾಧಿಕಾ, ಮುಳ್ಳೇರಿಯಾದಲ್ಲಿ ಕಾವೇರಿ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು.

ಚಿತ್ರದ ಸಹನಿರ್ಮಾಪಕರಾದ ಬಿ. ಅಶೋಕ್‌ ಕುಮಾರ್, ಸುಹಾನ್‌ ಪ್ರಸಾದ್, ನಿತಿನ್‌ ರಾಜ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News