ಪುದು ಗ್ರಾಮದ ಹಲವೆಡೆ ಮಳೆಗೆ ಹಾನಿ; ಗ್ರಾಪಂ ನಿಯೋಗದಿಂದ ಪರಿಶೀಲನೆ: ಪರಿಹಾರಕ್ಕೆ ಸೂಚನೆ

Update: 2022-07-05 17:19 GMT

ಬಂಟ್ವಾಳ, ಜು. 5: ಪುದು ಗ್ರಾಮ ವ್ಯಾಪ್ತಿಯ ಅಮ್ಮೆಮಾರಿನ ಗುಡ್ಡ ಕುಸಿತ ಪ್ರದೇಶ ಸೇರಿದಂತೆ ಪ್ರಾಕೃತಿಕ ವಿಕೋಪದ ಹಲವು ಪ್ರದೇಶಗಳಿಗೆ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಪಿಡಿಒ ಹರೀಶ್ ಕೆ.ಎ.ಅವರ ನಿಯೋಗ ತೆರಳಿ ಪರಿಶೀಲನೆ ನಡೆಸಿದರು. 

ಜತೆಗೆ ಪರಿಹಾರಕ್ಕಾಗಿ ಶಾಸಕ ಯು.ಟಿ.ಖಾದರ್ ಅವರ ಜತೆ ಚರ್ಚಿಸಿ ಹೆಚ್ಚಿನ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲು ಮನವಿ ಮಾಡಿದರು. 

ಕಲ್ಲತಡಮೆ ಕುಂಪನಮಜಲು ಪ್ರದೇಶದಲ್ಲಿ ಚರಂಡಿಯಲ್ಲಿ ಹೂಳು ತುಂಬಿ ಕೃತಕ ನೆರೆ ಉಂಟಾದ ಪ್ರದೇಶದಲ್ಲಿ ಗ್ರಾ.ಪಂ.ನಿಂದ ಜೇಸಿಬಿ ಮೂಲಕ ಹೂಳು ತೆಗೆದು ನೀರು ಹರಿಯುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಅಮ್ಮೆಮಾರ್, ಪುಂಚಮೆ ಎರಡೂ ರಸ್ತೆಯೂ ನೀರು ತುಂಬಿ ಬ್ಲಾಕ್ ಆಗಿದ್ದು, ಅದನ್ನು ತೆರವು ಮಾಡಲಾಯಿತು. 

ಫರಂಗಿಪೇಟೆ ಹೊಳೆಬದಿ ಜುಮಾದಿಗುಡ್ಡೆಯಲ್ಲಿ ಗುಡ್ಡ ಕುಸಿತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಅಪಾಯಕಾರಿಯಾಗಿದ್ದ ೨ ತೆಂಗಿನಮರ ತೆರವು ಮಾಡಲಾಯಿತು. ಅಮ್ಮೆಮಾರ್ ಪದೆಂಜಾರು ನಾರಾಯಣ ಮುಖಾರಿ ಅವರ ಮನೆಗೆ ತೆರಳಿ ಪರ್ಯಾಯ ವ್ಯವಸ್ಥೆಗಾಗಿ ಕಂದಾಯ ಇಲಾಖೆಗೆ ಸೂಚಿಸಲಾಯಿತು. 

ಸುಜೀರ್ ಮಲ್ಲಿ ಶಿವಪ್ಪ ಅಂಚನ್ ಅವರ ಮನೆಯ ಬಳಿ ಕುಸಿತಕ್ಕೊಳಗಾಗಿ ಮನೆ ಅಪಾಯದಲ್ಲಿದ್ದು, ಅಲ್ಲಿದ್ದ ೭-೮ ಮರಗಳನ್ನು ತೆರವು‌ ಮಾಡಲಾಯಿತು. ಜತೆಗೆ ಅಮ್ಮೆಮಾರ್ ಹಾಜಿರಾ, ಉಸ್ಮಾನ್ ಅವರ ಮನೆಯ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಲಾಯಿತು.

ಗ್ರಾಪಂ ನವರ ಸೂಚನೆ ಮೇರೆಗೆ ಗ್ರಾಮಕರಣಿಕೆ ವಿಜೇತಾ ಅವರು ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಹಾರಕ್ಕಾಗಿ ವರದಿ ನೀಡಿದರು. 

ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಗ್ರಾ.ಪಂ.ಸದಸ್ಯರಾದ ಝಾಹೀರ್ ಕುಂಪನಮಜಲು, ರಿಯಾಝ್ ಕುಂಪನಮಜಲು, ರಝಾಕ್, ಇಕ್ಬಾಲ್ ಸುಜಿರ್, ಗ್ರಾಪಂ ಸಿಬಂದಿ ಮೊಹಮ್ಮದ್ ಶರೀಫ್, ಸ್ಥಳೀಯರಾದ ಸುಂದರ ಶೆಟ್ಟಿ, ಧನರಾಜ್, ಸೂರ್ಯ, ಸೈಯದ್ ಬಾವಾ, ಅಲ್ತಾಫ್ ಫರಂಗಿಪೇಟೆ, ಹುಸೇನ್ ಅಮ್ಮೆಮಾರ್, ಫಾರೂಕ್ ಪುಂಚಮೆ, ಮುಹಮ್ಮದ್ ಮೋನು, ರಝಾಕ್, ಇಕ್ಬಾಲ್ ಮಾರಿಪಳ್ಳ, ಫಯಾಝ್ ಪುಂಚಮೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News