ರಿಶಿ ಸುನಕ್, ಸಾಜಿದ್ ಜಾವಿದ್ ರಾಜೀನಾಮೆ; ಪತನದ ಅಂಚಿಗೆ ಬ್ರಿಟನ್ ಸರ್ಕಾರ

Update: 2022-07-06 02:31 GMT

ಲಂಡನ್: ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿಯವರ ಅಳಿಯ ಮತ್ತು ಬ್ರಿಟನ್‍ನ ಹಣಕಾಸು ಸಚಿವ ರಿಶಿ ಸುನಕ್ ಹಾಗೂ ಪಾಕಿಸ್ತಾನಿ ಮೂಲದ ಆರೋಗ್ಯ ಸಚಿವ ಸಾಜಿದ್ ಜಾವಿದ್ ಅವರು ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಜಾನ್ಸನ್ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ ಎಂದು timesofindia.com ವರದಿ ಮಾಡಿದೆ.

ಜಾನ್ಸನ್ ನಾಯಕತ್ವದ ವಿರುದ್ಧ ಸಂಪುಟ ಅವಿಶ್ವಾಸ ಮಂಡಿಸಲು ಸಂಘಟಿತ ಪ್ರಯತ್ನಗಳನ್ನು ಉಭಯ ಸಚಿವರು ನಡೆಸಿದ ಅರ್ಧ ಗಂಟೆ ಅಂತರದಲ್ಲೇ ಸಚಿವರು ರಾಜೀನಾಮೆ ನೀಡಿದ್ದಾರೆ. ಬೋರಿಸ್ ಜಾನ್ಸನ್ ಅವರ ನಿಷ್ಠೆ ಮತ್ತು ಸಾಮರ್ಥ್ಯವನ್ನು ಉಭಯ ಸಚಿವರು ಪ್ರಶ್ನಿಸಿದ್ದು, ತಮ್ಮ ರಾಜೀನಾಮೆ ಪತ್ರಗಳನ್ನು ಟ್ವಿಟ್ಟರ್‌ ನಲ್ಲಿ ಪ್ರಕಟಿಸಿದ್ದಾರೆ. ಇನ್ನಷ್ಟು ಸಚಿವರ ರಾಜೀನಾಮೆಗಳನ್ನು ನಿರೀಕ್ಷಿಸಲಾಗಿದ್ದು, ಜಾನ್ಸನ್ ಪ್ರಧಾನಿಯಾಗಿ ಮುಂದುವರಿಯುವುದು ಅಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

ಲೈಂಗಿಕ ಅಪರಾಧ ಪ್ರಕರಣದ ಆರೋಪ ಎದುರಿಸುತ್ತಿರುವ ಕ್ರಿಸ್ ಪಿಂಚೆರ್ ಅವರನ್ನು ಸರ್ಕಾರದ ಪಾತ್ರಕ್ಕೆ ನಿಯೋಜಿಸಿಕೊಂಡ ಬಗ್ಗೆ ಬಿಬಿಸಿ ಸಂದರ್ಶನದಲ್ಲಿ ಜಾನ್ಸನ್ ಕ್ಷಮೆ ಯಾಚಿಸಿದ ಬೆನ್ನಲ್ಲೇ ಜಾವೇದ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಪಿಂಚೆರ್ ವಿರುದ್ಧದ ಪ್ರಕರಣಗಳ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಜಾನ್ಸನ್ ಪ್ರತಿಪಾದಿಸಿದ್ದರು. ಲೈಂಗಿಕ ದುರ್ನಡತೆ ಆರೋಪದಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದನನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು.

ಕನ್ಸರ್ವೇಟಿವ್ ಪಕ್ಷದ ಉಪಾಧ್ಯಕ್ಷ ಬಿಮ್ ಅಫೋಲಮಿ ಮಂಗಳವಾರ ರಾತ್ರಿ ಟಿವಿ ನೇರ ಪ್ರಸಾರದ ಕಾರ್ಯಕ್ರಮದ ನಡುವೆಯೇ ರಾಜೀನಾಮೆ ಘೋಷಿಸಿ, ಪ್ರಧಾನಿಯವರ ಅಧೀನದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾವೇದ್ ರಾಜೀನಾಮೆ ನೀಡಿದ 10 ನಿಮಿಷಗಳ ಬಳಿಕ ರಿಶಿ ಸುನಕ್ ಕೂಡಾ ತಮ್ಮ ರಾಜೀನಾಮೆ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News