ಜು. 16ರಂದು ಕ್ಯಾಂಪಸ್ ಫ್ರಂಟ್‌ನಿಂದ ಗರ್ಲ್ಸ್ ಕಾನ್ಫರೆನ್ಸ್

Update: 2022-07-06 12:53 GMT

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂಬ ಘೋಷವಾಕ್ಯದೊಂದಿಗೆ ಜುಲೈ 16ರಂದು ಮಂಗಳೂರಿನಲ್ಲಿ ಗರ್ಲ್ಸ್ ಕಾನ್ಸರನ್ಸ್ ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ದ.ಕ. ಜಿಲ್ಲಾ ಕ್ಯಾಂಪಸ್ ಫ್ರಂಟ್ ನ ಜಿಲ್ಲಾ ನಾಯಕಿ ಆಸ್ರೀನ್ ಬಂಟ್ವಾಳ, ಇತ್ತೀಚೆಗೆ ಕೇವಲ ಶಿರವಸ್ತ್ರ ಧರಿಸಿದ್ದಾರೆಂಬ ಕಾರಣದಿಂದ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯನ್ನು ಶಿಕ್ಷಣ ಪಡೆಯುವುದರಿಂದ ತಡೆಯಲಾಗಿದೆ.  ಕೊನೆಯದಾಗಿ ನ್ಯಾಯಾಂಗ ವ್ಯವಸ್ಥೆಯಿಂದಲೂ ಸಹ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗಲಿಲ್ಲ. ಇದರ ಪೂರ್ವ ನಿಯೋಜನೆ ಮತ್ತು ಉದ್ದೇಶವನ್ನರಿತಾಗ ರಾಜ್ಯ ಸರಕಾರ ನೇರವಾಗಿ ಈ ಸಮಸ್ಯೆಯನ್ನು ಹಟ್ಟು ಹಾಕಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆಸಿರುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು.

ಮಹಿಳೆಯರನ್ನು ವಿಶೇಷವಾಗಿ ಮುಸ್ಲಿಂ ಯುವತಿಯರನ್ನು ಸುಲ್ಲಿ ಬಾಯಿ,  ಬುಲ್ಲಿ ಬಾಯಿ ಡೀಲ್ಸ್ ಎಂಬ ಆ್ಯಪ್ ಗಳ ಮೂಲಕ ಹರಾಜು ಮಾಡಿ ಮಾನ ಹಾನಿ ಮಾಡಿ, ಅವರನ್ನು ಮಾನಸಿಕವಾಗಿ ಕುಗ್ಗಿಸುವುದನ್ನು ಸಹ ಮಾಡಲಾಯಿತು.  ರಾಜ್ಯದ ಪ್ರಸಕ್ತ ಚಿತ್ರಣವನ್ನರಿತಾಗ ಮಹಿಳೆಯರ ಮೇಲಿನ ದೌರ್ಜನ್ಯವು ಮಿತಿ ಮೀರಿದೆ. ಸರಕಾರ ಮಹಿಳೆಯರ ಸುರಕ್ಷತೆಯ ಬಗ್ಗೆ ತುಟಿ ಬಿಚ್ಚದೆ, ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿದೆ. ಮಹಿಳೆಯರ, ಮುಸ್ಲಿಂ ವಿದ್ಯಾರ್ಥಿನಿಯರ ಆಯ್ಕೆಯ ಸ್ವಾತಂತ್ರವನ್ನು ಕಿತ್ತುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನೇ ಬುಡಮೇಲುಗೊಳಿಸಲು ಹೊರಟಿರುವ ಪ್ರಭುತ್ವದ ಕುತಂತ್ರವನ್ನು ವಿಫಲಗೊಳಿಸಲು ರಾಜಿ ರಹಿತ ಹೋರಾಟ ಒಂದೇ ದಾರಿ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ ಈ ನಿಟ್ಟಿನಲ್ಲಿ ಈ ಕಾನ್ಫರೆನ್ಸ್ ನಡೆಯಲಿದೆ ಎಂದವರು ಹೇಳಿದರು.

ಕಾನ್ಫರೆನ್ಸ್ ಅಂಗವಾಗಿ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಜ್ಯೋತಿ ವೃತ್ತದಿಂದ ವಿದ್ಯಾರ್ಥಿನಿಯರ ಜಾಥಾ ಪ್ರಾರಂಭಗೊಂಡು ಪುರಭವನದಲ್ಲಿ ಸಮಾಪ್ತಿಗೊಳ್ಳಲಿದೆ. ಪುರಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹಾಗೂ ರಾಜ್ಯದ ಹಲವಾರು ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ  ರಾಜ್ಯ ಸಮಿತಿ ಸದಸ್ಯರಾದ ಮುರ್ಶಿದಾ ಮಂಗಳೂರು,   ಫಾತಿಮಾ ಉಸ್ಮಾನ್,  ಜಿಲ್ಲಾ ನಾಯಕಿ ಫಾತಿಮಾ ಶಝ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News