ಪ್ರಕೃತಿ ವಿಕೋಪಕ್ಕೆ ಸ್ಪಂದಿಸದ ಸರಕಾರ: ಶಾಸಕ ಯು.ಟಿ. ಖಾದರ್ ಆಕ್ರೋಶ

Update: 2022-07-06 16:57 GMT

ಮಂಗಳೂರು: ದ.ಕ. ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಬಿರುಸಿನ ಮಳೆಯಾಗುತ್ತಿದ್ದರೂ ಕೂಡ ರಾಜ್ಯ ಸರಕಾರ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಮನೆಗೆ ಹಾನಿ, ಗುಡ್ಡ ಕುಸಿತ ಸಂಭವಿಸಿದೆ. ಕಡಲ್ಕೊರೆತವೂ ತೀವ್ರವಾಗಿದೆ. ಆದರೆ ಯಾವೊಬ್ಬ ಸಚಿವರೂ ಇನ್ನೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಉಳ್ಳಾಲ ನಗರಸಭೆ ವ್ಯಾಪ್ತಿಯ ಸೀ ಗ್ರೌಂಡ್ ಹಾಗೂ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟಪಾಡಿಯ ಮತ್ತಿತರ ಪ್ರದೇಶಗಳ ಜನರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದಾರೆ. ಇಂಥಹ ತುರ್ತು ಸಂದರ್ಭಗಳಲ್ಲಿ ತಕ್ಷಣ ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ. ಆದರೆ ಯಾವ ಸಚಿವರೂ ಭೇಟಿ ನೀಡದೆ ಅನ್ಯಾಯ ಎಸಗಿದ್ದಾರೆ. ಒದೊಂದ ಕರುಣೆ ಮತ್ತು ಮಾನವೀಯತೆ ಇಲ್ಲದ ಸರಕಾರ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ಜೊತೆ ಮಾತುಕತೆ

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಯು.ಟಿ.ಖಾದರ್ ತಕ್ಷಣ ಜಿಲ್ಲಾ ಮಟ್ಟದ ಪ್ರಾಕೃತಿಕ ವಿಕೋಪದ ಸಭೆ ಕರೆದು ಹಾನಿ ಸಂಭವಿಸಿದ ಮನೆಗಳಿಗೆ ಪರಿಹಾರ ಒದಗಿಸಲು ಮತ್ತು ಗುಡ್ಡ, ಗೋಡೆ ಕುಸಿತದ ಸಂಭವಿಸಿದ ಪ್ರದೇಶಗಳಿಗೆ ಅನುದಾನ ಬಿಡುಗಡೆಗೊಳಿಸಿ ದುರಸ್ಥಿ ಪಡಿಸುವಂತೆ ಒತ್ತಾಯಿಸಿದರು.

ಅನುದಾನ ಬಿಡುಗಡೆಗೆ ಆಗ್ರಹ

ಕಡಲ್ಕೊರೆತದಿಂದ ಹಾನಿಗೊಳಗಾದ ತಡೆಗೋಡೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಅಂದಾಜು ಪಟ್ಟಿ ಸಲ್ಲಿಸಿದ್ದಾರೆ. ಅದರಂತೆ ಉಳ್ಳಾಲ ಸೀಗ್ರೌಂಡ್ ಬಳಿ 60 ಲಕ್ಷ ರೂ. ಹಾಗೂ ಸೋಮೇಶ್ವರ ಬಟಪಾಡಿಗೆ 1.30 ಕೋ.ರೂ. ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಖಾದರ್ ಆಗ್ರಹಿಸಿದರು.

ಮಂಗಳೂರು ಕ್ಷೇತ್ರ ವ್ಯಾಪ್ತಿಯ ತೊಕ್ಕೊಟ್ಟು, ಕೆರೆಬೈಲು, ಹಳೆಕೋಟೆ, ಕೋಟೆಪುರ, ಮೊಗವೀರ ಪಟ್ಣ, ಬಟಪಾಡಿ, ಉಚ್ಛಿಲ, ಮುನ್ನೂರು ಮತ್ತಿತರ ಕಡೆ ಮಳೆ ಹಾನಿ ಮತ್ತು ಕಡಲ್ಕೊರೆತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ ಶಾಸಕ ಖಾದರ್ ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News