ಬಂಟ್ವಾಳ | ಶೌಚಾಲಯದಲ್ಲಿ ಕೂಡಿಹಾಕಿ ಹಿಂಸೆ: ತಾಯಿಯಿಂದ ಮಗ, ಸೊಸೆ ವಿರುದ್ಧ ದೂರು

Update: 2022-07-07 05:35 GMT

ಬಂಟ್ವಾಳ, ಜು.7: ಮಗ ಮತ್ತು ಸೊಸೆ ಸೇರಿ ತನ್ನನ್ನು ಶೌಚಾಲಯದೊಳಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ವೃದ್ಧೆಯೊಬ್ಬರು ಬಂಟ್ವಾಳ‌ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಬೆಂಜನಪದವು ಕರಾವಳಿ ಸೈಟ್ ಎಂಬಲ್ಲಿ ಈ‌ ಘಟನೆ ನಡೆದಿದೆ ಎನ್ನಲಾಗಿದ್ದು, 70 ವರ್ಷ ವಯಸ್ಸಿನ ಗಿರಿಜಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ತಾನು ಕರಾವಳಿ ಸೈಟ್ ನಲ್ಲಿ ಮಗ ಹರಿರಾಂ‌ ಮತ್ತು ಸೊಸೆ ಪೂಜಾ ಜೊತೆ ವಾಸ್ತವ್ಯವಿದ್ದು, ಜನವರಿಯಲ್ಲಿ ತಾನು ಜಾರಿಬಿದ್ದು ಸೊಂಟಕ್ಕೆ ಗಾಯವಾಗಿತ್ತು.‌ ಆ ಬಳಿಕ ತನ್ನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಜಾರಿ ಬಿದ್ದು ಸೊಂಟಕ್ಕೆ ಪೆಟ್ಟಾದರೂ ಮಗ ಮತ್ತು ಸೊಸೆ ನನಗೆ ಚಿಕಿತ್ಸೆ ಕೊಡಿಸಿಲ್ಲ. ಶೌಚಗೃಹದಲ್ಲಿ ಕೂಡಿಹಾಕಿ ಒಂದು ಹೊತ್ತು ಊಟ ಮತ್ತು ಚಹಾ ನೀಡುತ್ತಿದ್ದರು. ಇಬ್ಬರೂ ಸೇರಿ "ವೃದ್ಧೆ ಸಾಯುವುದೂ ಇಲ್ಲ" ಎಂದು ನಿರಂತರ ಬೈಯುತ್ತಿದ್ದರು. ಹಸಿವೆಯಿಂದ ಊಟ ಕೇಳಿದರೆ "ನಿನಗೆ ಊಟ ಕೊಡುವುದಿಲ್ಲ, ಮಣ್ಣು ತಿಂದು ಸಾಯಿ" ಎಂದು ತುಳು ಭಾಷೆಯಲ್ಲಿ ಸೊಸೆಯು ಬೈಯುತ್ತಾಳೆ ಎಂದವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವೃದ್ಧೆ ದೌರ್ಜನ್ಯಕ್ಕೆ ಒಳಗಾಗಿರುವ ಮಾಹಿತಿ ಪಡೆದ ಹಿರಿಯ ನಾಗರಿಕ ಸಮಿತಿಯವರು ಗಿರಿಜಾರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News