ಕಾರ್ಮಿಕ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

Update: 2022-07-07 17:00 GMT

ಕುಂದಾಪುರ, ಜು.೭: ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನಡೆಯುತ್ತಿರುವ ಖರೀದಿಗಳ ಭ್ರಷ್ಟಾಚಾರ ನಿಲ್ಲಿಸುವಂತೆ ಹಾಗೂ ಇದುವರೆಗೂ ನಡೆದಿರುವ ಎಲ್ಲಾ ಖರೀದಿಗಳ ಅವ್ಯವಹಾರಗಳನ್ನು ತನಿಖೆಗೊಳಪಡಿಸಿ ಕಾರ್ಮಿಕ ಸಚಿವ ಹಾಗೂ ಕಾರ್ಮಿಕ ಆಯುಕ್ತರನ್ನು ವಜಾಗೊಳಿಸಲು ಆಗ್ರಹಿಸಿ ಇಂದು  ಕಟ್ಟಡ ಕಾರ್ಮಿಕರ ರಾಜ್ಯ ವ್ಯಾಪಿ ಪ್ರತಿಭಟನೆ ಕುಂದಾಪುರದಲ್ಲಿಯೂ ನಡೆಯಿತು.

ಕುಂದಾಪುರ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ೧೫ ವರ್ಷಗಳಿಂದ ಕಟ್ಟಡ ಕಾರ್ಮಿಕರಿಗೆ ಮನೆಕಟ್ಟುವ ಸಹಾಯಧನ ಕಾನೂನಿನಲ್ಲಿ ಅವಕಾಶವಿದ್ದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಕಟ್ಟಡ ಕಾರ್ಮಿಕ ರಿಗೆ ಭವಿಷ್ಯನಿಧಿಗಾಗಿ ಆಗ್ರಹಿಸಿದ್ದರೂ ಕ್ರಮವಹಿಸಿಲ್ಲ. ವೈದ್ಯಕೀಯ ತಪಾಸಣೆ ಯಲ್ಲಿ ಪತ್ತೆಯಾಗುವ ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ಕಾರ್ಮಿಕರಿಗೆ ನಗದು ರಹಿತ ವ್ಯವಸ್ಥೆ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರ ಮಂಡಳಿಯ ಸೆಸ್ ಹಣವನ್ನು ಕಾರ್ಮಿಕರ ಸೌಲಭ್ಯಗಳಿಗೆ ಬಳಸುವ ಬದಲು ಕೆಲವೇ ಕೆಲವು ಕಾರ್ಮಿಕರಿಗೆ ಟೆಂಡರ್ ಮೂಲಕ ಕಿಟ್‌ಗಳಿಗೆ ಹಣ ವ್ಯಯಿಸುವುದರಲ್ಲಿ ಮಂತ್ರಿಗಳು ಹಾಗೂ ಕಾರ್ಮಿಕ ಆಯುಕ್ತರು ಆಸಕ್ತಿ ವಹಿಸುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದರು.

ಇದೇ ವೇಳೆ ಮರಳು ಸಮಸ್ಯೆ ಬಗೆಹರಿಸಲು,ಕಟ್ಟಡ ಸಾಮಗ್ರಿಗಳ ಬೆಲೆ ನಿಯಂತ್ರಿಸಬೇಕು. ಕಟ್ಟಡ ಕಾರ್ಮಿಕರ ೧೯೯೬ ಸೆಸ್ ಕಾನೂನು ಉಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಚಿಕ್ಕ ಮೊಗವೀರ, ಸಂತೋಷ್ ಹೆಮ್ಮಾಡಿ, ಅಲೆಕ್ಸಾಂಡರ್, ಜಗದೀಶ ಆಚಾರ್, ಚಂದ್ರಶೇಖರ ವಿ. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News