ನಿವೃತ್ತ ಎಸ್‌ಪಿ ಜಯಂತ್ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

Update: 2022-07-07 17:51 GMT

ಮಂಗಳೂರು: ಹಳೆಯ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಎಸ್‌ಪಿ ಜಯಂತ್ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ವಾರಂಟ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ಅಂದಿನ ಇನ್‌ಸ್ಪೆಕ್ಟರ್ ಜಯಂತ್ ಶೆಟ್ಟಿ ಮತ್ತು ಎಸ್‌ಐ ಶಿವಪ್ರಕಾಶ್ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕಬೀರ್ ಉಳ್ಳಾಲ್ ಎಂಬುವರು ವಕೀಲರಾದ ಖಾಝಿ ಮುಖಾಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣ ಕೈಗೆತ್ತಿಕೊಂಡ ವಿಚಾರಾಧೀನ ನ್ಯಾಯಾಲಯ, ಜಯಂತ್ ಶೆಟ್ಟಿ ಹಾಗು ಶಿವಪ್ರಕಾಶ್‌ಗೆ ನೋಟಿಸ್ ಜಾರಿಗೊಳಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಈ ಇಬ್ಬರು ಪೊಲೀಸ್ ಅಧಿಕಾರಗಳು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಕಬೀರ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಹೈಕೋರ್ಟ್ ಪ್ರಕರಣವನ್ನು ವಿಚಾರಣೆ ನಡೆಸಿ, ಮರು ತನಿಖೆ ನಡೆಸುವಂತೆ ಆದೇಶಿಸಿ, ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆ ಪ್ರಕಾರ ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಜಯಂತ್ ಶೆಟ್ಟಿಗೆ ಯಾವುದೇ ನೋಟಿಸ್ ಸಿಕ್ಕಿರಲಿಲ. ಈ ಮಧ್ಯೆ ವಿಚಾರಾಧೀನ ನ್ಯಾಯಾಲಯ ಏಕಾಏಕಿ ಜೂ.20ರಂದು ಜಯಂತ್ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರ ಮೂಲಕ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು.

ಈ ಅನಿರೀಕ್ಷಿತ ಬೆಳವಣಿಗೆಯ ಬಗ್ಗೆ ಆಶ್ಚರ್ಯಗೊಂಡ ಜಯಂತ್ ಶೆಟ್ಟಿ ತಮ್ಮ ವಕೀಲ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ನನಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೆಕ್ಷನ್ 197ಸಿಆರ್‌ಪಿಸಿ ಹಾಗು 170 ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆದಿಲ್ಲ. ಆದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ  ವಿನಂತಿಸಿಕೊಂಡಿದ್ದರು.

ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಇಡೀ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಜಯಂತ್ ಶೆಟ್ಟಿ ಪರ ವಕೀಲರಾದ ಪದ್ಮರಾಜ್ ಆರ್. ಮಾಹಿತಿ ನೀಡಿದ್ದಾರೆ.

ದಕ್ಷ, ಪ್ರಾಮಾಣಿಕ ಹಾಗು ಖಡಕ್ ಎಸ್ಪಿ ಆಗಿದ್ದ ಜಯಂತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿರುವುದು ಕುತೂಹಲ ಕೆರಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News