×
Ad

ರಾಜ್ಯದಲ್ಲಿ ವಿಪತ್ತು, ಪ್ರವಾಹ ಎದುರಿಸಲು ಸರಕಾರ ಸನ್ನದ್ಧವಾಗಿದೆ: ಸಚಿವ ಆರ್.ಅಶೋಕ್

Update: 2022-07-07 23:28 IST

ಸುಳ್ಯ: ದಕ್ಷಿಣ ಕನ್ನಡ ಹಾಗು ಕೊಡಗು ಗಡಿಯಲ್ಲಿ ಉಂಟಾಗಿರುವ ಭೂ ಕಂಪನವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನಿಗಾ ವಹಿಸಲಾಗುತಿದೆ. ಜನರು ಯಾವುದೇ ರೀತಿಯ ಆತಂಕಪಡುವ ಅಗತ್ಯ ಇಲ್ಲ. ಎಲ್ಲಾ ರೀತಿಯ ಪ್ರಾಕೃತಿಕ ವಿಕೋಪ ಹಾಗು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಸರ್ವ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಭೂಕಂಪನದಿಂದ ಆತಂಕ ಸೃಷ್ಠಿಯಾದ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿ ಪ್ರದೇಶ ಕೊಡಗಿನ ಚೆಂಬು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಭೂ ಕಂಪನ ಬಾದಿತ ಪ್ರದೇಶ, ಭೂ ಕುಸಿತ, ಮನೆ ಹಾನಿಯನ್ನು ಪರಿಶೀಲಿಸಿದ ಬಳಿಕ ಚೆಂಬು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಇದೀಗ ಉಂಟಾಗಿರುವ ಭೂಕಂಪನಗಳು ತೀವ್ರತೆ ಕಡಿಮೆಯಾಗಿರುವ ಲಘು ಕಂಪನಗಳು. ತಜ್ಞರು ಈ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದಾರೆ. ಹೆಚ್ಚು ತೀವ್ರತೆಯ ಭೂಕಂಪ ಆಗುವ ಸಾಧ್ಯತೆ ಇಲ್ಲ. ಆದುದರಿಂದ ಯಾರೂ ಭಯ ಪಡುವ ಅಗತ್ಯ ಇಲ್ಲ. ಲಘು ಭೂ ಕಂಪನದಿಂದ ಭೂಮಿ ಬಿರುಕು ಉಂಟಾಗಿ ಮಳೆ ಹೆಚ್ಚು ಸುರಿದರೆ ಆ ಬಿರುಕಿನ ಮೂಲಕ ನೀರಿಂಗಿ ಭೂ ಕುಸಿತ ಆಗುವ ಅಪಾಯ ಇದೆ. ಅಂತಹಾ ಸ್ಥಿತಿ ಇದ್ದರೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಸ್ಥಿತಿ ಇದ್ದರೆ ಅಂತಹಾ ಕುಟುಂಬಗಳನ್ನು ಸ್ಥಳಾಂತರ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮನೆ ಹಾನಿ ಆದರೆ 5 ಲಕ್ಷ ರೂ ಪರಿಹಾರ

ಪ್ರಾಕೃತಿ ವಿಕೋಪದ ಹಾನಿ, ಪರಿಹಾರಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ.ಮನೆಗಳು ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ ಪರಿಹಾರ ನೀಡಲಾಗುವುದು. ಭಾಗಷಃ ಹಾನಿಯಾದರೆ.50 ಸಾವಿರ ಪರಿಹಾರ ನೀಡಲಾಗುವುದು. ಈ ಕುರಿತು ಬೆಂಗಳೂರಿಗೆ ತೆರಳಿದ ಕೂಡಲೇ ಆದೇಶ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಇನ್ನೂ 3 ದಿನ ಮಳೆ

ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಈ ಕುರಿತು ನಿಗಾ ವಹಿಸಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ, ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡ,  ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ, ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News