ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ʼವಿನಾಯಿತಿಗಳʼ ಕುರಿತು ಕೇಳಿದ್ದ ಮಾಹಿತಿಗೆ ದಿಲ್ಲಿ ಹೈಕೋರ್ಟ್ ತಡೆ

Update: 2022-07-08 10:06 GMT

 ಹೊಸದಿಲ್ಲಿ: ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ವಿನಾಯಿತಿಗಳ ಕುರಿತಂತೆ ಮಾಹಿತಿಯೊದಗಿಸಲು ಆದಾಯ ತೆರಿಗೆ ಇಲಾಖೆಗೆ ಸೂಚಿಸಿ ಕೇಂದ್ರ ಮಾಹಿತಿ ಆಯೋಗ ಹೊರಡಿಸಿರುವ ಆದೇಶಕ್ಕೆ ಗುರುವಾರ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಮಾಹಿತಿ ಹಕ್ಕುಗಳ ಕಾಯಿದೆ ವ್ಯಾಪ್ತಿಯಲ್ಲಿ ಆಯೋಗವು ವಿವರಗಳನ್ನು ಕೇಳಿತ್ತು.

ಪಿಎಂ ಕೇರ್ಸ್ ಫಂಡ್ ಒಂದು ಸಾರ್ವಜನಿಕ ಸಂಸ್ಥೆಯೇ ಅಥವಾ ಅಲ್ಲವೇ ಎಂಬ ವಿಚಾರ ಹೈಕೋರ್ಟಿನ ವಿಭಾಗೀಯ ಪೀಠದ ಮುಂದಿದೆ ಎಂದು ತಡೆಯಾಜ್ಞೆ ವಿಧಿಸುವ ಆದೇಶ ಹೊರಡಿಸುವ ವೇಳೆ ನ್ಯಾಯಮೂರ್ತಿ ಯಶವಂತ್ ವರ್ಮ ಹೇಳಿದರು.

ಮುಂಬೈ ಮೂಲದ ಹೋರಾಟಗಾರ ಗಿರೀಶ್ ಮಿತ್ತಲ್ ಎಂಬವರು ಪಿಎಂ-ಕೇರ್ಸ್ ಫಂಡ್‍ಗೆ ನೀಡಲಾಗಿರುವ ತೆರಿಗೆ ವಿನಾಯಿತಿಗಳ ಕುರಿತು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರಲ್ಲದೆ ತೆರಿಗೆ ವಿನಾಯಿತಿ ಕೋರಿ ಈ ಫಂಡ್ ಸಲ್ಲಿಸಿದ್ದ ಎಲ್ಲಾ ದಾಖಲೆಗಳ ಪ್ರತಿಗಳನ್ನು ಹಾಗೂ ಈ ವಿನಾಯಿತಿಗಳನ್ನು ನೀಡುವ ವೇಳೆ ಮಾಡಲಾದ ಟಿಪ್ಪಣಿಗಳ ಪ್ರತಿಗಳನ್ನೂ ಕೇಳಿದ್ದರು.

ಅವರ ಅರ್ಜಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ತಿರಸ್ಕರಿಸಿದ ನಂತರ ಅವರು ಕೇಂದ್ರ ಮಾಹಿತಿ ಆಯೋಗದ ಕದ ತಟ್ಟಿದ್ದರು.

ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯ ಜೊತೆಗೆ ಒದಗಿಸಲಾಗಿದ್ದ ದಾಖಲೆಗಳ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿತ್ತು.

ಆದರೆ ಈ ಆದೇಶದ ವಿರುದ್ಧ ಆದಾಯ ತೆರಿಗೆ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಡಿಸೆಂಬರ್ 2020ರಲ್ಲಿ ಪಿಎಂ ಕೇರ್ಸ್ ಫಂಡ್‍ನ ನಿಬಂಧನೆಯೊಂದರಲ್ಲಿ ಅದು ಖಾಸಗಿ ಸಂಸ್ಥೆ ಎಂಬ ಅಂಶ ಹೊರಬಿದ್ದಿತ್ತು ಹಾಗೂ ಆರ್‍ಟಿಐ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಲಾಗಿತ್ತು.

ನಂತರ ಆರ್‍ಟಿಐ ಅರ್ಜಿಗೆ ಉತ್ತರಿಸುವಾಗ ಈ ಫಂಡ್ ಸರಕಾರಿ ಒಡೆತನದ್ದು ಎಂದು ಸರಕಾರ ತಿಳಿಸಿತ್ತು.  ಇದು ಆರ್‍ಟಿಐ ವ್ಯಾಫ್ತಿಗೆ ಬರುವುದಿಲ್ಲ ಏಕೆಂದರೆ ಫಂಡ್‍ಗೆ ಖಾಸಗಿ ಮೂಲಗಳಿಂದ ದೇಣಿಗೆ ಬರುತ್ತದೆ ಎಂದೂ ಸರಕಾರ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News