×
Ad

ವಿದ್ಯಾರ್ಥಿಗಳ ಸುರಕ್ಷತೆಗಾಗಿ ನೀಡಲಾಗುವ ರಜೆ ಕಡ್ಡಾಯ ಪಾಲನೆಗೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚನೆ

Update: 2022-07-08 22:48 IST

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದೊಂದು  ವಾರದಿಂದ ಅತಿ ಹೆಚ್ಚು ಪ್ರಮಾಣದ ಮಳೆಯಾಗುತ್ತಿರುವುದ ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಲಾಗುತ್ತಿದೆ. ಅದನ್ನು ಸಂಬಂಧಿಸಿದ ಕಾಲೇಜುಗಳ ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.

ಪ್ರಾಕೃತಿ ವಿಕೋಪ ನಿರ್ವಹಣೆಯಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ನಡೆಸಿದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ವ್ಯವಸ್ಥೆಯನ್ನು ಮೊದಲು ಸಮೀಕ್ಷೆ ಮಾಡಬೇಕು. ಅವರು ಗ್ರಾಮೀಣ ಪ್ರದೇಶ, ಹಾಸ್ಟೆಲ್‌ನಿಂದ ಅಥವಾ ಇತರ ವ್ಯವಸ್ಥೆಗಳು ಸೇರಿದಂತೆ ಕಾಲೇಜಿಗೆ ಹೇಗೆ ಬರುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬೇಕು, ಜಿಲ್ಲಾಡಳಿತ ರಜೆ ಘೋಷಿಸಿದಾಗ ಕಡ್ಡಾಯವಾಗಿ ರಜೆ ನೀಡಲೇಬೇಕು, ಉಲ್ಲಂಘಿಸಿದ್ದಲ್ಲಿ ವಿಪತ್ತು ನಿರ್ವಹಣಾ ಅಧಿನಿಯಮದ ೨೪-೩೪ರ ನಿಯಮಗಳನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದರು.

ಜಿಲ್ಲಾಡಳಿತ ಒಂದು ಭಾರಿ ಆದೇಶ ಹೊರಡಿಸಿದರೆ ಅದು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ. ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಪ್ರಭಾರ ಆಯುಕ್ತ ಪ್ರಶಾಂತ್ ಮಿಶ್ರ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಸುಧಾಕರ್ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News